ನಂಜನಗೂಡು: ಜೂ.27 ರಂದು ನಡೆಯಲಿರುವ ನಾಡಪ್ರಭು ಕೆಂಪೇಗೌಡರ ಜಯಂತಿ ಹಾಗೂ ಜು.2 ರಂದು ನಡೆಯಲಿರುವ ಡಾ.ಫ.ಗು ಹಳೆಕಟ್ಟೆ ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ನಂಜನಗೂಡು ತಾಲ್ಲೂಕು ಆಡಳಿತ ಭವನದ ತಹಶೀಲ್ದಾರ್ ಕಛೇರಿಯಲ್ಲಿ ಶನಿವಾರ ಪೂರ್ವಭಾವಿ ಸಭೆ ನಡೆಯಿತು.
ಶಾಸಕ ದರ್ಶನ್ ಧ್ರುವನಾರಾಯಣ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಯಂತಿ ಆಚರಣೆಯ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಮಾತನಾಡಿದ ಮುಖಂಡರು, ಜಯಂತಿ ಅಂಗವಾಗಿ ನಂಜನಗೂಡು ಪಟ್ಟಣದಲ್ಲಿ ಕೆಂಪೇಗೌಡರ ಉದ್ಯಾನವನ, ಸರ್ಕಲ್ ಹಾಗೂ ರಸ್ತೆಗಳಿಗೆ ನಾಮಕರಣ ಮಾಡಬೇಕು. ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಜಯಂತಿ ಆಚರಿಸಬೇಕು ಎಂದು ಸಲಹೆ ನೀಡಿದರು.
ಸಭೆಯ ಬಳಿಕ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್, ಜೂ.27 ರಂದು ಕೆಂಪೇಗೌಡ ಜಯಂತಿ ಹಾಗೂ ಜು.2 ರಂದು ಡಾ.ಫ.ಗು ಹಳೆಕಟ್ಟೆ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿದ್ದೇವೆ. ತಮ್ಮೆಲ್ಲರ ಸಲಹೆ-ಸೂಚನೆಯಂತೆ ಕಾರ್ಯಕ್ರಮ ಆಚರಣೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕೆಂಪೇಗೌಡ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಿದ್ದೇವೆ.
ಜೂ.27 ರಂದು ತಾಲ್ಲೂಕು ಕಛೇರಿಯಲ್ಲಿ ಜಯಂತಿ ಆಚರಿಸಲಾಗುವುದು. ಜು.2 ರಂದು ಡಾ.ಫ.ಗು ಹಳೆಕಟ್ಟೆ ಜಯಂತಿಯನ್ನು ಆಚರಿಸಲಾಗುತ್ತದೆ. ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿಗಳು, ತಾಲ್ಲೂಕು ಆಡಳಿತ ಸಮಿತಿ, ಸಮಾಜದ ಹಿರಿಯರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ತಹಶೀಲ್ದಾರ್ ಡಾ.ಸ್ಮಿತಾ ರಾಮು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ದಸಂಸ ಸಂಚಾಲಕ ಶಂಕರಪುರ ಸುರೇಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಚಂದನ್ ಗೌಡ, ದೇಬೂರು ಅಶೋಕ್, ಮಂಜುನಾಥ್, ಸಂಜಯ್ ಗೌಡ, ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

