ನಂಜನಗೂಡು: ಜಾನುವಾರುಗಳನ್ನ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನ ಪೊಲೀಸರು ಸಿನಮೀಯ ಶೈಲಿಯಲ್ಲಿ ಚೇಸ್ ಮಾಡಿದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸರ ಚೇಸ್ ಗೆ ಬೆದರಿದ ಕಿಡಿಗೇಡಿಗಳು ವಾಹನವನ್ನ ವೇಗವಾಗಿ ಓಡಿಸಿದ ಪರಿಣಾಮ ಉರುಳಿ ಬಿದ್ದಿದೆ. ಅಪ್ ಸೆಟ್ ಆದ ವಾಹನದಲ್ಲಿ 20 ಕರುಗಳನ್ನ ತುಂಬಿಕೊಂಡು ಸಾಗಿಸುತ್ತಿದ್ದ ಖದೀಮರ ಕೃತ್ಯ ಬಯಲಾಗಿದೆ. ಇದೀಗ ಪೊಲೀಸರು ಬೊಲೆರೋ ವಾಹನವನ್ನ ಸೀಜ್ ಮಾಡಿದ್ದು 20 ಕರುಗಳನ್ನ ರಕ್ಷಿಸಿದ್ದಾರೆ.
ಜಯಪುರ ಪೊಲೀಸರಿಗೆ ಅಕ್ರಮವಾಗಿ ಜಾನುವಾರುಗಳನ್ನ ಸಾಗಿಸುತ್ತಿರುವ ಮಾಹಿತಿ ಬಂದಿದೆ. ಪಿಎಸ್ಸೈ ಹೇಮಾವತಿ ರವರು ವಾಹನವನ್ನ ಸಿನಮೀಯ ಶೈಲಿಯಲ್ಲಿ ಚೇಸ್ ಮಾಡಿದ್ದಾರೆ. ಅತಿವೇಗದಿಂದ ಚಾಲನೆ ಮಾಡುತ್ತಿದ್ದ ಖದೀಮರು ಹುಲ್ಲಹಳ್ಳಿ ರಸ್ತೆ ಕಡೆಗೆ ತಿರುಗಿದ್ದಾರೆ. ಕೂಡಲೇ ಹೇಮಾವತಿ ರವರು ಹುಲ್ಲಹಳ್ಳಿ ಪಿಎಸ್ಐ ಚೇತನ್ ಕುಮಾರ್ ರವರಿಗೆ ಮಾಹಿತಿ ನೀಡಿದ್ದಾರೆ.
ಅಲರ್ಟ್ ಆದ ಚೇತನ್ ಕುಮಾರ್ ಸಹ ಸಿಬ್ಬಂದಿಗಳ ಸಮೇತ ಜಾನುವಾರುಗಳನ್ನ ಸಾಗಿಸುತ್ತಿದ್ದ ವಾಹನ ಹಿಡಿಯಲು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈ ವೇಳೆ ಅಹಲ್ಯಾ ಗ್ರಾಮದ ಬಳಿ ಜಾನುವಾರುಗಳನ್ನ ತುಂಬಿದ್ದ ವಾಹನ ಪಲ್ಟಿಯಾಗಿದೆ. ವಾಹನದಲ್ಲಿದ್ದ ವ್ಯಕ್ತಿಗಳು ಪರಾರಿಯಾಗಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದಾಗ ಕರುಗಳು ಸಹ ಚೆಲ್ಲಾಪಿಲ್ಲಿಯಾಗಿ ಬಿದ್ದ ದೃಶ್ಯ ಕಂಡು ಬಂದಿದೆ. ಕೂಡಲೇ ಸ್ಥಳೀಯರ ಸಹಾಯದಿಂದ 20 ಕರುಗಳನ್ನ ರಕ್ಷಿಸಿ ಪಿಂಜರಾಪೋಲ್ ಗೆ ರವಾನಿಸಿ ಬೊಲೆರೋ ವಾಹನ ವಶಪಡಿಸಿಕೊಂಡಿದ್ದಾರೆ. ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

