ನಂಜನಗೂಡು: ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣರಾಜಪುರ, ವೀರೇದೇವನಪುರ ಗ್ರಾಮಗಳ 6ನೇ ಮತ್ತು 11ನೇ ಗಸ್ತು ಗ್ರಾಮಗಳಲ್ಲಿ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮಕ್ಕೆ ಕವಲಂದೆ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಬಿ.ಬಸವರಾಜು ಚಾಲನೆ ನೀಡಿದರು.

ರಾಜ್ಯ ಸರ್ಕಾರದ ವಿನೂತನ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಮನೆಗಳಿಗೆ ತೆರಳಿ ಸೇವೆಗಳ ಬಗ್ಗೆ ಜನರಿಗೆ ವಿವರಿಸಿದರು. ಸೈಬರ್ ಅಪರಾಧ, ಮಾದಕ ವಸ್ತು, ಪೋಕ್ಸೊ ಕಾಯ್ದೆ, ಕಳವು, ರಸ್ತೆ ಸಂಚಾರ ನಿಯಮ ಸೇರಿದಂತೆ ವಿವಿಧ ವಿಷಯದ ಬಗ್ಗೆ ಅರಿವು ಮೂಡಿಸಲಾಯಿತು.

ನಂತರ ಪಿಎಸ್ಐ ಬಿ. ಬಸವರಾಜು ಮಾತನಾಡಿ, ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯಿಂದ ಈ ವಿನೂತನ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಪ್ರತಿ ಮನೆಗಳ ಬಾಗಿಲಲ್ಲಿ ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಖ್ಯೆ ಹೊಂದಿರುವ ಸ್ಟಿಕರ್ ಗಳನ್ನು ಅಂಟಿಸಲಾಗಿದ್ದು, ಯಾವುದೇ ಸಮಸ್ಯೆಗಳಿದ್ದರೆ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ ತಕ್ಷಣವೇ ನಮ್ಮ ಪೊಲೀಸ್ ಅಧಿಕಾರಿಗಳು ನಿಮ್ಮ ಮನೆಗಳಿಗೆ ಬರುತ್ತಾರೆ.

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಪೊಲೀಸ್ ಸಿಬ್ಬಂದಿಯೇ ಮನೆ ಬಾಗಿಲಿಗೆ ಬರಲಿದ್ದಾರೆ. ಮನೆ ಮನೆಗೇ ಪೊಲೀಸ್ ಎಂದರೆ ಪ್ರತಿ ಮನೆಗೆ ಪೊಲೀಸ್ ಎಂದರ್ಥ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಮತ್ತು ಅಪರಾಧವನ್ನು ತಡೆಗಟ್ಟುವುದು ಮಾತ್ರವಲ್ಲದೆ, ನಿರ್ಭೀತ ವಾತಾವರಣವನ್ನು ಸೃಷ್ಟಿಸುವುದು ಮತ್ತು ಸಾರ್ವಜನಿಕ ರಕ್ಷಣೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಎಸ್ಐ ಬಿ. ಬಸವರಾಜು, ಎಸ್‌.ಬಿ ರಮೇಶ್, ಸಿಬ್ಬಂದಿಗಳಾದ ಚೆಲುವರಾಜು, ಚಂದ್ರು, ಬಸವರಾಜು ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.