ಮೈಸೂರು: ಜಾಗದ ವಿಚಾರಕ್ಕೆ ಒಂದೇ ಕುಟುಂಬದ ನಡುವೆ ಗಲಾಟೆ ನಡೆದ ಹಿನ್ನೆಲೆಯಲ್ಲಿ ಯುವಕರನ್ನು ತನಗೆ ಕರಿಸಿ ಪೊಲೀಸರು ತಿಳಿಸಿರುವ ಘಟನೆಯನ್ನು ಖಂಡಿಸಿ ತಿ. ನರಸೀಪುರ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಪೊಲೀಸರ ದೌರ್ಜನ್ಯ ಖಂಡಿಸಿದರು.

ತುಂಬಲ ಗ್ರಾಮದಲ್ಲಿ ಜಾಗದ ವಿಚಾರಕ್ಕೆ ಒಂದೇ ಕುಟುಂಬದ ನಡುವೆ ಗಲಾಟೆ ನಡೆದಿದ್ದು, ಯುವಕರನ್ನು ತಿ. ನರಸೀಪುರ ಪೊಲೀಸ್ ಠಾಣೆಗೆ ಕರೆಸಿ ಪೊಲೀಸರು ಮನಸೋ ಇಚ್ಛೆ ಬಂದಂತೆ ಥಳಿಸಿದ್ದಾರೆ.

ತುಂಬಲ ಗ್ರಾಮದ ಆನಂದ್, ಪೃಥ್ವಿ, ಅರ್ಜುನ್, ಪ್ರವೀಣ್, ಅಪ್ಪು ಎಂಬ ಯುವಕರ ಮೇಲೆ ಲಾಠಿಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರ ಮೇಲೆ ಗಂಭೀರವಾಗಿ ಆರೋಪಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್, ಸಬ್ ಇನ್ಸ್ಪೆಕ್ಟರ್ ಜಗದೀಶ್ ಧೂಳ್ ಶೆಟ್ಟಿ, ಪಿಎಸ್ಐ ಶಂಕರ್ ಎಂಬುವರು ಹಲ್ಲೆ ನಡೆಸಿದ್ದಾರೆ.

ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಕರ್ತವ್ಯದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.