ಮೈಸೂರು: ಇಂದು ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್ ಕರೆ ನೀಡಿದ್ದು, ಹೋಟೆಲ್ ಮಾಲೀಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ಮೈಸೂರು ಜಿಲ್ಲಾ ವಕೀಲರ ಸಂಘ ಸೇರಿ ಹಲವರಿಂದ ನೈತಿಕ ಬೆಂಬಲ ಸಿಕ್ಕಿದೆ.

ಸಾರಿಗೆ ಎಂದಿನಂತೆ ಸಂಚರಿಸುತ್ತಿದೆ. ಹೋಟೆಲ್‌ಗಳಲ್ಲಿ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ 7 ಗಂಟೆಗೆ ಕನ್ನಡ ಪರ ಸಂಘಟನೆಗಳಿಂದ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಪ್ರತಿಭಟನೆಗೆ ಮಾತ್ರ ಸೀಮಿತವಾದಂತೆ ಬಂದ್ ಕಾಣುತ್ತಿದೆ.

ಪ್ರತಿಭಟನಾ ನಿರತ ಕನ್ನಡ ಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆಯುತ್ತಿದ್ದಂತೆ ಕೆಎಸ್ಆರ್ಟಿಸಿ ಬಸ್ ಎಂದಿನಂತೆ ಸಂಚಾರ ಆರಂಭ ವಾಗಿದೆ. ಬೆಳಗ್ಗೆ 6 ರಿಂದ 8 ರವರಗೆ ಪ್ರತಿಭಟನಾಕಾರರು ಬಸ್ ತಡೆದಿದ್ದಾರೆ. ಸದ್ಯಕ್ಕೆ ಎಂದಿನಂತೆ ಬಸ್ ಗಳು ಸಂಚಾರ ಆರಂಭಿಸಿದೆ. ಬಂದ್ ಗೆ ಬಹುತೇಕ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಬರ್ಬನ್ ಬಸ್ ನಿಲ್ದಾಣದ ಮುಖ್ಯ ದ್ವಾರದ ಬಳಿ ಪ್ರತಿಭಟನಾ ನಿರತರನ್ನ ಬಂಧಿಸಿ ಬಸ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ. ಮೈಸೂರಿನಲ್ಲಿ ಕನ್ನಡ ಪರ ಸಂಘಟನೆಯಿಂದ ಮೆರವಣಿಗೆ ಪ್ರತಿಭಟನೆ ನಡೆಯಿತು. ಅಗ್ರಹಾರ ವೃತ್ತದ ಬಳಿ ಮೆರವಣಿಗೆ ಮಾಡಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದರು.

ಸಂಘದ ಅಧ್ಯಕ್ಷ ಎಸ್ ಬಾಲಕೃಷ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಎಂಇಎಸ್ ಪುಂಡಾಟಿಕೆ ಖಂಡಿಸಿ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.