ಪಿರಿಯಾಪಟ್ಟಣ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 6.5 ಲಕ್ಷ ಮೌಲ್ಯದ ಎರಡು ಚಿನ್ನದ ಮಾಂಗಲ್ಯ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪಿರಿಯಾಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಣಸೂರು ತಾಲೂಕು ಹಳೇ ಪೆಂಜಳ್ಳಿ ಗ್ರಾಮದ ರವಿಕುಮಾರ್ ಮತ್ತು ಹರಳಹಳ್ಳಿ ಗ್ರಾಮದ ರಂಜಿತ್ ಬಂಧಿತ ಸರಗಳ್ಳರು ಇವರನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಮಹಿಳೆಯರಿಂದ ಕಿತ್ತುಕೊಂಡು ಹೋಗಿದ್ದ 6.5 ಲಕ್ಷ ಮೌಲ್ಯದ 53 ಗ್ರಾಂ ತೂಕದ ಒಂದು ಚಿನ್ನದ ಮಾಂಗಲ್ಯ ಸರ, ಮತ್ತು 45 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ತಾತನಹಳ್ಳಿ ಗ್ರಾಮದಲ್ಲಿ ಇಬ್ಬರು ಆರೋಪಿಗಳು ಪಲ್ಸರ್ ಬೈಕಿನಲ್ಲಿ ಬಂದು ಸಿಗರೇಟ್ ತೆಗೆದುಕೊಳ್ಳುವ ನೆಪದಲ್ಲಿ ಪೆಟ್ಟಿಗೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಣಿ ಎಂಬುವವರ ಚಿನ್ನದ ಮಾಂಗಲ್ಯ ಸರ ಹಾಗೂ ತಾಲ್ಲೂಕಿನ ವಿ.ಜಿ ಕೊಪ್ಪಲು ಗ್ರಾಮದಲ್ಲಿ ಪಲ್ಸರ್ ಬೈಕಿನಲ್ಲಿ ಬಂದು ಸಿಗರೇಟ್ ತೆಗೆದುಕೊಳ್ಳುವ ನೆಪದಲ್ಲಿ ಪೆಟ್ಟಿಗೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಸುಮಾ ಎಂಬುವವರ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದು, ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.

ಎಸ್ಪಿ ಸೀಮಾ ಲಾಟ್ಕರ್, ಹೆಚ್ಚುವರಿ ಎಸ್ಪಿ ಗಳಾದ ನಂದಿನಿ, ನಾಗೇಶ್, ಡಿವೈಎಸ್ಪಿ ಗೋಪಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಪಿರಿಯಾಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜಿ.ಕೆ.ರಾಘವೇಂದ್ರ , ಪಿಎಸ್ ಐ ಗಳಾದ ಕೆ.ಆಕಾಶ್, ಅಚ್ಚಮ್ಮ ಮತ್ತು ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಕೆ.ಎಸ್ ಲಿಂಗರಾಜಪ್ಪ, ಸಂಜಯ್, ಈರಣ್ಯ, ಅಣ್ಣಯ್ಯ, ನವೀನ್ ಕುಮಾರ್, ನಾರಾಯಣ ಶೆಟ್ಟಿ ಮತ್ತು ಬೆಟ್ಟದಪುರ ಪೊಲೀಸ್ ಠಾಣೆಯ ಅಸ್ಲಾಮ್ ಪಾಷ, ಹುಣಸೂರು ಪಟ್ಟಣ ಠಾಣೆಯ ಇರ್ಫಾನ್ ಮತ್ತು ಬಿಳಿಕೆರೆ ಪೊಲೀಸ್ ಠಾಣೆಯ ಶ್ರೀನಿವಾಸ್ ಪ್ರಸಾದ್ ರವರುಗಳನ್ನೊಳಗೊಂಡಂತೆ ತಂಡ ಆರೋಪಿಗಳ ಪತ್ತೆ ಹಚ್ಚಿದೆ, ಇವರ ಕಾರ್ಯಕ್ಕೆ ಎಸ್ಪಿ ಸೀಮಾ ಲಾಟ್ಕರ್ ಡಿವೈಎಸ್ಪಿ ಗೋಪಾಲಕೃಷ್ಣ ಮತ್ತಿತರರು ಅಭಿನಂದಿಸಿದ್ದಾರೆ.