ನಂಜನಗೂಡು: ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ನಂಜನಗೂಡು ತಾಲ್ಲೂಕು ಆಡಳಿತ ಭವನದ ಕಸಬಾ ಹೋಬಳಿ ನಾಡಕಛೇರಿಯಲ್ಲಿ ಜನಜಾತ್ರೆಯೇ ಸೇರಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ಮುಂಜಾನೆಯಿಂದಲೇ ಸ್ಥಳೀಯರು ಪರದಾಡುವಂತಾಗಿದೆ.
ಬೆಳಗ್ಗೆಯಿಂದಲೇ ನೂರಾರು ವಿದ್ಯಾರ್ಥಿಗಳು, ಮಹಿಳೆಯರು ಮತ್ತು ವಯೋವೃದ್ಧರು ಪ್ರಮಾಣ ಪತ್ರ, ಪಿಂಚಣಿ ಹಾಗೂ ಆರ್ ಟಿಸಿ, ಜಮೀನಿನ ದಾಖಲಾತಿಗಳನ್ನು ಪಡೆಯಲು ಇನ್ನಿತರ ಸೌಲಭ್ಯಗಳಿಗಾಗಿ ಕಛೇರಿಯ ಮುಂದೆ ಮುಗಿಬಿದ್ದಿದ್ದಾರೆ. ಸಾಲು ಸಾಲಾಗಿ ನಿಂತು ಗಂಟೆಗಟ್ಟಲೆ ಕಾಯುವಂತಾಗಿದೆ.
ಈಗಾಗಲೇ ತಾಲ್ಲೂಕು ಆಡಳಿತ ಒಂದು ಕೌಂಟರ್ನಲ್ಲಿ ಮಾತ್ರ ಅರ್ಜಿ ಸ್ವೀಕರಿಸುತ್ತಿದೆ. ಇದರಿಂದಾಗಿ ಬೆಳಗ್ಗಿನಿಂದ ಬಂದವರಿಗೂ ಸಂಜೆಯಾದರೂ ಕೆಲಸ ಆಗುತ್ತಿಲ್ಲ. ಹಳ್ಳಿಗಳಿಂದ ಬಂದ ವಯಸ್ಸಾದವರು, ವಿದ್ಯಾರ್ಥಿಗಳು ಮುಂಜಾನೆಯಿಂದಲೇ ಕಾದು ಕುಳಿತಿದ್ದಾರೆ. ಕೆಲವರು ಕೆಲಸ ಬಿಟ್ಟು, ಕೆಲವರು ಕಾಲೇಜು ತಪ್ಪಿಸಿಕೊಂಡು ಬಂದರೂ ಖಾಲಿ ಕೈಯಲ್ಲಿ ವಾಪಸ್ ಹೋಗುವಂತಾಗಿದೆ. ದಿನನಿತ್ಯ ಹಳ್ಳಿಯಿಂದ ಕಛೇರಿಗೆ ಅಲೆದಾಡುವ ದುಸ್ಥಿತಿ ನಿರ್ಮಾಣವಾಗಿದೆ.
ಶಾಲಾ-ಕಾಲೇಜು ಪ್ರವೇಶಕ್ಕೆ ಪ್ರಮಾಣ ಪತ್ರ ಕಡ್ಡಾಯ. ಆದರೆ ತೆಗೆದುಕೊಳ್ಳಲು ವ್ಯವಸ್ಥೆಯೇ ಇಲ್ಲ. ಅಧಿಕಾರಿಗಳು ಜನರ ಸಂಕಷ್ಟ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೆ ಇನ್ನೂ ಕನಿಷ್ಠ 2 ಕೌಂಟರ್ಗಳನ್ನು ತೆರೆದು, ಆನ್ಲೈನ್ ವ್ಯವಸ್ಥೆಯನ್ನು ಸರಳಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸರ್ಕಾರ “ಜನಸ್ನೇಹಿ ಆಡಳಿತ” ಎಂದು ಹೇಳಿಕೊಳ್ಳುತ್ತದೆ. ಆದರೆ ನಾಡಕಛೇರಿಯ ಸ್ಥಿತಿ ನೋಡಿದರೆ ಅದು ಕೇವಲ ಕಾಗದದಲ್ಲಷ್ಟೇ ಉಳಿದಂತಿದೆ.
-ಸಿ.ಎಂ ಸುಗಂಧರಾಜು ನ್ಯೂಸ್ ಕರ್ನಾಟಕ ಮೈಸೂರು.

