ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು.
ನಂಜನಗೂಡು ನಗರದ ಕಾರ್ಮೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟ- 2025 ಕಾರ್ಯಕ್ರಮವನ್ನು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಪಾರಿವಾಳವನ್ನು ಹಾರಿಸಿ, ಗುಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಖೋ-ಖೋ ಆಟಗಾರ್ತಿ ಎಸ್.ಎಲ್ ಅಮೃತ ಕ್ರೀಡಾ ಜ್ಯೋತಿ ಬೆಳಗಿಸಿದರು.
ಬಳಿಕ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹಾಕಲು ಉತ್ತಮ ವೇದಿಕೆಯಾಗಿದೆ. ಅಲ್ಲದೆ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ, ದೈಹಿಕವಾಗಿ ಬೆಳವಣಿಗೆ ಜತೆಗೆ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಬರುತ್ತದೆ.

ಕ್ರೀಡಾಪಟುಗಳು ಕ್ರೀಡೆಯನ್ನು ಗೌರವಿಸಬೇಕು, ಸಮಯ ಪಾಲನೆಗೆ ಆದ್ಯತೆ ನೀಡಬೇಕು, ನಿರಂತರ ತರಬೇತಿ ಪಡೆದು ಧನಾತ್ಮಕ ಚಿಂತನೆ ಅಳವಡಿಸಿಕೊಳ್ಳಬೇಕು. ಕ್ರೀಡೆಗಳಲ್ಲಿ ಭಾಗವಹಿಸಿದರೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳು ಬರಲಿದೆ. ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಲು ಕ್ರೀಡೆ ಮಹತ್ವ ಹೊಂದಿದೆ. ಕಾಲಹರಣಕ್ಕಾಗಿ ಕ್ರೀಡೆಯಲ್ಲಿ ತೊಡಗಬಾರದು ಕ್ರೀಡೆಯ ನೀತಿ ನಿಯಮಗಳಿಗೆ ಬದ್ಧರಾಗಿ ಆಟವಾಡಿ ಯಶಸ್ಸುಗಳಿಸಬೇಕು. ಕ್ರೀಡೆಗಳನ್ನು ಒಂದು ದಿನಕ್ಕೆ ಸೀಮಿತ ಮಾಡಬಾರದು. ಸೋಲು ಗೆಲುವನ್ನು ವಿದ್ಯಾರ್ಥಿಗಳು ಸಮಾನವಾಗಿ ಸ್ವೀಕರಿಸಬೇಕು ಎಂದು ಕ್ರೀಡಾಪಟುಗಳಿಗೆ ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಪಿ ನಾಗಮ್ಮ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಮತ್ತು ಕ್ರೀಡಾ ಮನೋಭಾವ ಬೆಳೆಸಲು ಉಪಯುಕ್ತವಾಗಿವೆ. ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿವೆ. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸ್ಪರ್ಧೆ ಮಾಡುವುದು ಮುಖ್ಯವಾಗಿದೆ ಎಂದು ತಿಳಿಸಿದರು.

ಬಳಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಮೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಜಂಟಿ ಕಾರ್ಯದರ್ಶಿ ಸಿಸ್ಟರ್ ಮಾರಿಯಾ ಅರುಣ ಎ.ಸಿ ಮಾತನಾಡಿ, ಕ್ರೀಡಾಕೂಟಗಳು ಕ್ರೀಡಾಸ್ಫೂರ್ತಿ, ಸಹೋದರತ್ವ, ಸಾಮರಸ್ಯ ಬೆಳೆಸುತ್ತದೆ. ಶಿಸ್ತು, ಸಂಯಮ ಬೆಳೆಯುತ್ತದೆ. ಸ್ನೇಹಜೀವಿ ಆಗುತ್ತೀರಿ. ನಿತ್ಯ ಯೋಗ, ಧ್ಯಾನ ಮಾಡುವುದರಿಂದ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಅನಾದಿ ಕಾಲದಿಂದಲೂ ಕ್ರೀಡೆಗಳು ಬದುಕಿನ ಅವಿಭಾಜ್ಯ ಅಂಗವಾಗಿರುವುದನ್ನು ನೋಡುತ್ತೇವೆ ಎಂದು ಹೇಳಿದರು.
ಇದನ್ನೂ ಮುನ್ನ ಕ್ರೀಡಾಪಟುಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪಥ ಸಂಚಲನದ ಮೂಲಕ ಅತಿಥಿಗಳಿಗೆ ವಂದನೆ ಸಲ್ಲಿಸಲಾಯಿತು. ಕ್ರೀಡಾಪಟುಗಳಿಗೆ ಗಣ್ಯರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಪಿ ನಾಗಮ್ಮ, ಕಾರ್ಮೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಜಂಟಿ ಕಾರ್ಯದರ್ಶಿ ಸಿಸ್ಟರ್ ಮಾರಿಯಾ ಅರುಣ ಎ.ಸಿ, ರಾಷ್ಟ್ರೀಯ ಖೋ ಖೋ ಆಟಗಾರ್ತಿ ಎಸ್.ಎಲ್ ಅಮೃತ, ಕಾರ್ಮೆಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಮಾರಿಯಾ ಗ್ರೇಸಿ, ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಡೋರಿನ್ ಜಾಕ್ವೆಸ್ ಎ.ಸಿ ಸೇರಿದಂತೆ ಉಪನ್ಯಾಸಕರು ಹಾಗೂ ಕ್ರೀಡಾಪಟುಗಳು ಭಾಗವಹಿಸಿದ್ದರು.

