ನಂಜನಗೂಡು: ಅನುಮತಿ ಪಡೆಯದೆ ಶಿಕ್ಷಣ ಸಂಸ್ಥೆಯನ್ನು ಅಕ್ರಮವಾಗಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪೋಷಕರು ಮಂಗಳವಾರ ಶಾಲೆ ಮುಂಭಾಗ ಪ್ರತಿಭಟನೆ ನಡೆಸಿದರು.
ಗುಂಡ್ಲುಪೇಟೆ- ಊಟಿ ರಾಷ್ಟ್ರೀಯ ಹೆದ್ದಾರಿಯ ಹುಣಸನಾಳು ಗ್ರಾಮದ ಬಳಿ ಕೇರಳ ಮೂಲದ ಖಾಸಗಿ ವಿದ್ಯಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ಹಿಂದೆ ಗಾರ್ಡಿಯನ್ ಏಂಜಲ್ಸ್ ಸಂಸ್ಥೆಯ ಹೆಸರಿನಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಒಂದರಿಂದ ಐದನೇ ತರಗತಿವರೆಗೆ ಮಾತ್ರ ಪರವಾನಗಿ ಪಡೆದಿದೆ. ಆದರೆ, ಗೋಕುಲಂ ಇಂಟರ್ನ್ಯಾಷನಲ್ ಸ್ಕೂಲ್ ಎಂದು ಹೆಸರನ್ನು ಬದಲಾವಣೆ ಮಾಡಿಕೊಂಡು ಶಾಲೆಯನ್ನು ಅನಧಿಕೃತವಾಗಿ ನಡೆಸುತ್ತಿದ್ದಾರೆ.
ಪರವಾನಗಿ 2023ರಲ್ಲಿ ಮುಕ್ತಾಯಗೊಂಡಿದ್ದರೂ ಇದುವರೆಗೂ ರಿನಿವಲ್ ಮಾಡಿಕೊಂಡಿಲ್ಲ. ಇಷ್ಟೆಲ್ಲ ಅವಾಂತರಗಳು ಆಗಿದ್ದರು ಕೂಡ 6ನೇ ತರಗತಿಯನ್ನು ಅಕ್ರಮವಾಗಿ ನಡೆಸುತ್ತಿದ್ದಾರೆ. ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಸರಿಯಾದ ಶಿಕ್ಷಣ ಮಕ್ಕಳಿಗೆ ದೊರೆಯುತ್ತಿಲ್ಲ. ಅರ್ಹತೆ ಇರುವ ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲ. ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು, ಕೇಂದ್ರದ ಪಠ್ಯಕ್ರಮಕ್ಕೆ ಹೆಚ್ಚುವರಿ ಶುಲ್ಕವನ್ನು ಪಡೆಯುತ್ತಿದ್ದಾರೆ.
ಶಿಕ್ಷಣ ಇಲಾಖೆಗೆ ಒಂದು ದರಪಟ್ಟಿ ನೀಡಿ, ಪೋಷಕರಿಗೆ ಮತ್ತೊಂದು ದರ ಪಟ್ಟಿ ನೀಡಿ ಹಣ ಸುಲಿಗೆ ಮಾಡುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಮಹೇಶ್ ಶಾಮೀಲಾಗಿದ್ದಾರೆ. ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಇನ್ನೂ ಗೋಕುಲಂ ಇಂಟರ್ನ್ಯಾಷನಲ್ ಸ್ಕೂಲ್ ಆಡಳಿತ ಮಂಡಳಿ ಸರಿಯಿಲ್ಲ. ಕೂಡಲೇ ಆಡಳಿತ ಮಂಡಳಿಯನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ತಾಲ್ಲೂಕು ದಂಡಾಧಿಕಾರಿ ಶಿವಕುಮಾರ್ ಕಾಸ್ನೂರು ಭೇಟಿ ನೀಡಿ ಪೋಷಕರ ಸಮಸ್ಯೆಗಳನ್ನು ಆಲಿಸಿದರು. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಹಾಗೂ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಸದ್ಯದಲ್ಲೇ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪೋಷಕರಾದ ಎಂ.ಡಿ ಬಾಲರಾಜು, ರುದ್ರೇಶ್, ಪವಿತ್ರ ಕುಮಾರ್, ಅಮರನಾಥ್, ಪ್ರಶಾಂತ್, ದೇವಪ್ಪ, ಗಣೇಶ್ ಗಿರೀಶ್ ಅಶೋಕ್,ಪ್ರಭು, ಸೇರಿದಂತೆ ಪೋಷಕರು ಹಾಜರಿದ್ದರು.

