ನಂಜನಗೂಡು: ಮನುಸ್ಮೃತಿಯಲ್ಲಿ ದಲಿತ, ಹಿಂದುಳಿದ, ವಿಶೇಷವಾಗಿ ಮಹಿಳೆಯರನ್ನು ಪಶುಗಳಂತೆ ಕಾಣುವ ಅಂಶವನ್ನು ಕಂಡು ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್‌ ಅವರು 1927 ಡಿ.25ರಂದು ಸುಟ್ಟು ಹಾಕಿದ ದಿನದ ನೆನಪಿಗಾಗಿ ನಂಜನಗೂಡಿನ ಡಾ.ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಸದಸ್ಯರು ಮನುಸ್ಮೃತಿಯ ನಕಲು ಪ್ರತಿಕೃತಿ ದಹಿಸಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ನೇತೃತ್ವದಲ್ಲಿ ಜಮಾಯಿಸಿ, ಮನುಸ್ಮೃತಿಯ ನಕಲು ಪ್ರತಿಕೃತಿಯನ್ನು ದಹಿಸಿದರು. ನಂತರ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಮಾತನಾಡಿ, ದೇಶದಲ್ಲಿ ಮನುಸ್ಮೃತಿ ಹೇರುವಂತಹ ಸಂಘಟನೆಗಳು, ಸರಕಾರಗಳು ಅಧಿಕಾರ ಮಾಡುತ್ತಿರುವುದರಿಂದ ಜನರು ಅತ್ಯಂತ ಕಷ್ಟದ ದಿನಗಳನ್ನು ಎದುರಿಸುವಂತಾಗಿದೆ. ಅಂದು ದೇಶದಲ್ಲಿ ಮನುಸ್ಮೃತಿ ಹೇರುವಂತಹ ಸಂದರ್ಭ ಬಂದಾಗ ಬಾಬಾ ಸಾಹೇಬರು ಅಳುಕದೆ ಅದನ್ನು ವಿರೋಧಿಸಿದ್ದರು. ಅದರ ಭಾಗವಾಗಿ ನಾವು ಕೂಡ ವಿರೋಧಿಸಬೇಕು. ಯಾರು ಸಂವಿಧಾನ ಗೌರವಿಸುವುದಿಲ್ಲವೋ ಅಂತಹ ಸರಕಾರಗಳು, ಸಮುದಾಯಗಳು ಬಹಳ ದಿನ ಉಳಿಯವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಧರ್ಮದಲ್ಲಿರುವ ಅಸಮಾನತೆಯನ್ನು ಬಾಬಾ ಸಾಹೇಬರು ವಿರೋಧ ಮಾಡಿದ್ದರು. ಸಮಾಜದಲ್ಲಿ ಇನ್ನೂ ಕೂಡ ಜಾರಿಯಲ್ಲಿದೆ. ಹುಬ್ಬಳ್ಳಿಯಲ್ಲಿ ದಲಿತ ಯುವಕನನ್ನು ಮದುವೆಯಾದ ಕಾರಣಕ್ಕೆ ಗರ್ಭಿಣಿಯಾಗಿದ್ದ ಯುವತಿಯನ್ನೇ ಕೊಲೆ ಮಾಡಿ, ಮರ್ಯಾದೆ ಹತ್ಯೆ ಆಗಿದೆ. ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. ವರ್ಣಾಶ್ರಮ ವ್ಯವಸ್ಥೆಯಲ್ಲಿ ಜಾತಿಯನ್ನು ಸೃಷ್ಟಿಸಿ ಅದರಲ್ಲೂ ಹೆಣ್ಣನ್ನು ಪೂಜಿಸುವ ಈ ದೇಶದಲ್ಲಿ ಆಸ್ತಿ, ವಿದ್ಯೆ ಹಕ್ಕನ್ನು ಕಿತ್ತುಕೊಂಡಿದ್ದರು. ಮಹಿಳೆಯರು ಪುರುಷರ ಸೇವೆಗೆ ಮಾತ್ರ ಸೀಮಿತ ಮಾಡಿದ್ದರು. ಹಾಗಾಗಿ ನಾವು ಇದನ್ನು ವಿರೋಧಿಸುತ್ತೇವೆ ಎಲ್ಲಿಯತನಕ ಜಾತಿಯ ವ್ಯವಸ್ಥೆ, ಜೀವಂತವಾಗಿರುತ್ತದೆ ಅಲ್ಲಿಯ ತನಕವು ನಾವು ಮನಸ್ಮೃತಿಯನ್ನು ಸುಡುತ್ತೇವೆ ಎಂದು ಎಚ್ಚರಿಸಿದರು.

ನಂತರ ತಾಲ್ಲೂಕು ದಸಂಸ ಸಂಚಾಲಕ ಗಟ್ಟವಾಡಿ ಮಹೇಶ್ ಮಾತನಾಡಿ, ಮನು ಬರೆದ ಮನುಸ್ಮೃತಿಯನ್ನು ಬಾಬಾ ಸಾಹೇಬರು ಅಧ್ಯಯನ ಮಾಡಿ, ಅದರಲ್ಲಿದ್ದ ಅಸಮಾನತೆಯನ್ನು ವಿರೋಧಿಸಿ, ಮಹಿಳೆಯರು ಮತ್ತು ಪುರುಷರ ನಡುವೆ ಅಸಮಾನತೆಯನ್ನು ಎತ್ತಿ ತೋರಿಸುತ್ತಿದ್ದ ಮನಸ್ಮೃತಿಯನ್ನು ಸುಟ್ಟು ಹಾಕಿದರು. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ, ಆಸ್ತಿ, ಅಧಿಕಾರದಿಂದ ಮಹಿಳೆಯರು ವಂಚಿತರಾಗಿದ್ದಾರೆ ಎಂದು ಪ್ರತಿಪಾದಿಸಿದರು. ಬಾಬಾ ಸಾಹೇಬರು ಇದನ್ನು ಸುಟ್ಟುಹಾಕಿ, ದೇಶಕ್ಕೆ ಸಂದೇಶವನ್ನು ಕೊಟ್ಟಿದ್ದಾರೆ. ಹಾಗಾಗಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದಿಂದ ರಾಜ್ಯಾದ್ಯಂತ ಮನಸ್ಮೃತಿಯ ನಕಲು ಪ್ರತಿಯನ್ನು ಸುಟ್ಟುಹಾಕಿ ಸಂವಿಧಾನವನ್ನು ಎದೆಗಪ್ಪಿಕೊಂಡು ಮನಸ್ಮೃತಿಯನ್ನು ಧಿಕ್ಕರಿಸಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ತಾಲ್ಲೂಕು ಸಂಚಾಲಕ ಗಟ್ಟವಾಡಿ ಮಹೇಶ್, ಶಂಕರಪುರ ಸಿದ್ದರಾಜು, ಬಸವರಾಜು, ಹೂವಯ್ಯ, ಆನಂದ್ ಬ್ಯಾಳಾರು, ಸುರೇಶ್, ಅನಿಲ್, ಲೋಕೇಶ್, ಶಿವು, ಮಹೇಶ್, ಮಹದೇವಪ್ರಸಾದ್, ರಮೇಶ್ ಸೇರಿದಂತೆ ಹಲವರು ಹಾಜರಿದ್ದರು.