ಮೈಸೂರು: ಲಕ್ಷಾಂತರ ಸಾಲ ಮಾಡಿ ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಾಲಗಾರರ ಕಿರುಕುಳದಿಂದ ಬೇಸತ್ತ ವ್ಯಕ್ತಿ ಹೋಟೆಲ್ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಲವಾಲ ಹೋಬಳಿ ಹುಯಿಲಾಳು ಗ್ರಾಮದ ಶಂಕರ್ ಮೃತ ದುರ್ದೈವಿ. ಕಾರು ಚಾಲಕರಾಗಿದ್ದ ಶಂಕರ್ ಆನ್ ಲೈನ್ ಗೇಮ್ ಚಟಕ್ಕೆ ದಾಸರಾಗಿದ್ದರು.

ಲಕ್ಷಾಂತರ ಸಾಲ ಮಾಡಿ ಹಣ ಕಳೆದುಕೊಂಡಿದ್ದರು. ತಮ್ಮ ಕಾರನ್ನ ಗಿರವಿ ಇಟ್ಟು ಹಣ ಪಡೆದು ಆನ್ ಲೈನ್ ಗೇಮ್ ನಿಂದ ಕಳೆದುಕೊಂಡಿದ್ದರು. ಕೂರ್ಗಳ್ಳಿ ಅಭಿ ಎಂಬುವರ ಬಳಿಯೂ ಶಂಕರ್ ಸಾಲ ಪಡೆದಿದ್ದರು. ಬಡ್ಡಿ ಅಸಲು ತೀರಿಸುತ್ತಾ ಬಂದಿದ್ದರೂ ಸಾಲ ತೀರಿಸುವಂತೆ ಕೂರ್ಗಳ್ಳಿ ಅಭಿ ಒತ್ತಾಯ ಮಾಡುತ್ತಿದ್ದರು.

ಹಣಕ್ಕಾಗಿ ಮನೆ ಮುಂದೆ ಬಂದು ಗಲಾಟೆ ಮಾಡಿದ್ದಾರೆ. ಅಭಿ ವರ್ತನೆಯಿಂದ ಬೇಸತ್ತ ಶಂಕರ್ ಮನೆ ಬಿಟ್ಟಿದ್ದಾರೆ. ವಿಜಯನಗರ ವಾಟರ್ ಟ್ಯಾಂಕ್ ಬಳಿ ಇರುವ ಹೋಟೆಲ್ ನಲ್ಲಿ ಕೊಠಡಿ ಪಡೆದಿದ್ದಾರೆ. ಪತ್ನಿ ಪವಿತ್ರಾಗೆ ಅಭಿಯಿಂದ  ತನಗಾಗುತ್ತಿರುವ ಮಾನಸಿಕ ಕಿರುಕುಳದ ಬಗ್ಗೆ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಕೂಡಲೇ ಹೋಟೆಲ್ ರೂಂ ತಲುಪಿದ ಪತ್ನಿಗೆ ಶಂಕರ್ ನೇಣು ಕುಣಿಕೆಯಲ್ಲಿ ಕಂಡು ಬಂದಿದ್ದಾರೆ. ಶಂಕರ್ ಮೊಬೈಲ್ ಪರಿಶೀಲಿಸಿದಾಗ ಕೂರ್ಗಳ್ಳಿ ಅಭಿ ಹಾಗೂ ಇತರರು ಹಣಕ್ಕಾಗಿ ಕಿರುಕುಳ ನೀಡಿರುವ ಆಡಿಯೋ ಲಭ್ಯವಾಗಿದೆ. ಈ ಹಿನ್ನಲೆ ಪತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕೂರ್ಗಳ್ಳಿ ಅಭಿ ಹಾಗೂ ಇನ್ನಿಬ್ಬರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.