ನಂಜನಗೂಡು: ಸ್ವಾಭಿಮಾನವನ್ನು ಎಂದಿಗೂ ಮಾರಿಕೊಳ್ಳದೆ, ಹಕ್ಕುಗಳಿಗಾಗಿ ಧ್ವನಿ ಎತ್ತಿದ ದಿವಂಗತ ವಿ.ಶ್ರೀನಿವಾಸ ಪ್ರಸಾದ್ ಅವರ ಹಾದಿಯಲ್ಲಿ ಸಾಗಬೇಕು. ಯಾರೇ ತಪ್ಪು ಮಾಡಿದರೂ ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಅದೇ ಅಂಬೇಡ್ಕರ್‌ವಾದ; ನಮಗೆ ಚಮಚಗಿರಿ ವಾದ ಬೇಡ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ನಂಜನಗೂಡು ನಗರದ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ದಿವಂಗತ ವಿ. ಶ್ರೀನಿವಾಸ ಪ್ರಸಾದ್ ಅವರ 79ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಸ್ವಾಭಿಮಾನಿ ಧೀಮಂತ ಹೆಜ್ಜೆಗಳು-79’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀನಿವಾಸ ಪ್ರಸಾದ್ ಅವರು ನೀತಿವಂತ, ಪ್ರಜ್ಞಾವಂತ ಹಾಗೂ ತತ್ವಾಧಾರಿತ ರಾಜಕಾರಣಿಯಾಗಿದ್ದರು. ಪಕ್ಷಗಳು ಬದಲಾದರೂ ಅವರ ವ್ಯಕ್ತಿತ್ವ ಮತ್ತು ತತ್ವಗಳು ಬದಲಾಗಲಿಲ್ಲ. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಮನೋಭಾವ ಹೊಂದಿದ್ದ ಅವರು, ಬಿ. ಬಸವಲಿಂಗಪ್ಪ ಅವರೊಂದಿಗೆ ಹೆಜ್ಜೆ ಹಾಕಿ ಸಾಮಾಜಿಕ ನ್ಯಾಯದ ಪರ ಧ್ವನಿ ಎತ್ತಿದ್ದರು ಎಂದು ಸ್ಮರಿಸಿದರು.

ಹಕ್ಕುಗಳನ್ನು ಕೇಳುವಾಗ ಯಾರಿಗೂ ಗುಲಾಮರಾಗಬಾರದು ಎಂದು ಶ್ರೀನಿವಾಸ ಪ್ರಸಾದ್ ಹೇಳುತ್ತಿದ್ದರು. ಮೈಸೂರು–ಚಾಮರಾಜನಗರ ಭಾಗದಲ್ಲಿ ಅವರಂತಹ ನಾಯಕತ್ವ ಅಪರೂಪ. ಸ್ವಾಭಿಮಾನಿ ಎಂಬ ಹೆಸರನ್ನು ಪಡೆಯುವುದು ಸುಲಭವಲ್ಲ. ದಲಿತರ ಹುಲಿ ಎಂಬ ಹೆಸರನ್ನು ಪಡೆಯುವುದೂ ಅಷ್ಟೇ ಕಷ್ಟ ಎಂದು ಹೇಳಿದರು.

ದಲಿತರು ಯಾವುದೇ ಪಕ್ಷದ ಗುಲಾಮರಾಗಬಾರದು. ತಮ್ಮ ಭವಿಷ್ಯ ಮತ್ತು ಗೌರವದ ಬಗ್ಗೆ ಯೋಚಿಸಿ, ಯಾವ ಪಕ್ಷದಲ್ಲಿ ಗೌರವ ಸಿಗುತ್ತದೆಯೋ ಅಲ್ಲಿರಬೇಕು ಎಂದು ಕರೆ ನೀಡಿದ ಅವರು, ಸಂವಿಧಾನವನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಸಂವಿಧಾನ ತೊಂದರೆಯಲ್ಲಿಲ್ಲ, ನೀವು ತೊಂದರೆಯಲ್ಲಿದ್ದೀರಿ. ತಾಕತ್ತಿದ್ದರೆ ಸಂವಿಧಾನವನ್ನು ತೆಗೆಯಿರಿ, ನೋಡುತ್ತೇನೆ” ಎಂದು ಶ್ರೀನಿವಾಸ ಪ್ರಸಾದ್ ಹೇಳುತ್ತಿದ್ದ ಮಾತುಗಳನ್ನು ಸ್ಮರಿಸಿದ ಛಲವಾದಿ ನಾರಾಯಣಸ್ವಾಮಿ, ಅವರ ದಿಟ್ಟತನ ಮತ್ತು ಗಟ್ಟಿದ್ವನಿ ಎಲ್ಲರಿಗೂ ಬರುವುದಿಲ್ಲ ಎಂದರು.

ಇದೇ ವೇಳೆ ರಾಜ್ಯ ಸರ್ಕಾರದ ಎಸ್‌ಸಿಪಿ ಅನುದಾನ ಬಳಕೆಯ ಕುರಿತು ಟೀಕಿಸಿದ ಅವರು, ಪರಿಶಿಷ್ಟ ಜಾತಿಯ ಅಭಿವೃದ್ಧಿಗೆ ಮೀಸಲಾದ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳು ಮೂಡಿವೆ ಎಂದು ಆರೋಪಿಸಿದರು. ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿಯ ಅನುದಾನ ಬಳಸಲಾಗಿದೆ ಎಂಬ ಆರೋಪವನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮವನ್ನು ನಳಂದ ಬುದ್ಧ ವಿಹಾರದ ಭೋದಿ ರತ್ನ ಬಂತೇಜಿ ಉದ್ಘಾಟಿಸಿ, ಮಾತನಾಡಿದ ಅವರು, ಸಾಮಾಜಿಕ ಬದಲಾವಣೆ ಹಾಗೂ ಸಮ ಸಮಾಜ ನಿರ್ಮಾಣದ ಆಶಯದೊಂದಿಗೆ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳನ್ನು ಶ್ರೀನಿವಾಸ ಪ್ರಸಾದ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಯಾವುದೇ ವಿಚಾರದಲ್ಲೂ ರಾಜಿ ಮಾಡಿಕೊಳ್ಳದೆ ನೇರ-ನಿಷ್ಠುರವಾಗಿ ನಡೆದುಕೊಂಡಿದ್ದರು. ನಂಜನಗೂಡು ಅವರ ಅಚ್ಚುಮೆಚ್ಚಿನ ಕ್ಷೇತ್ರವಾಗಿತ್ತು ಎಂದು ಸ್ಮರಿಸಿದರು.

ಮುಖ್ಯ ಭಾಷಣಕಾರ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಮಾತನಾಡಿ, ಶ್ರೀನಿವಾಸ ಪ್ರಸಾದ್ ಅವರು ಆರು ಬಾರಿ ಸಂಸದರಾಗಿ, ಎರಡು ಬಾರಿ ಶಾಸಕರಾಗಿ ಹಾಗೂ ರಾಜ್ಯ ಮತ್ತು ಕೇಂದ್ರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಐದು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಸಾಮಾಜಿಕ ನ್ಯಾಯದ ಆಶಯದೊಂದಿಗೆ ಎಲ್ಲ ಸಮುದಾಯಗಳನ್ನು ಒಟ್ಟಾಗಿ ಕೊಂಡೊಯ್ಯುವ ಗುಣ ಹೊಂದಿದ್ದರು. ಹಳೆ ಮೈಸೂರು ಭಾಗದಲ್ಲಿ ಆರು ಬಾರಿ ಸಂಸದರಾಗಿ ಆಯ್ಕೆಯಾಗಿರುವುದು ಅವರ ರಾಜಕೀಯ ಜೀವನದ ಪ್ರಮುಖ ಹೆಗ್ಗಳಿಕೆ ಎಂದರು.

ಮಾಜಿ ಶಾಸಕ ಬಿ. ಹರ್ಷವರ್ಧನ್ ಮಾತನಾಡಿ, ಶ್ರೀನಿವಾಸ ಪ್ರಸಾದ್ ಅವರನ್ನು ಮರೆಯಲು ಸಾಧ್ಯವಿಲ್ಲ. ಬೂಸಾ ಚಳವಳಿಯ ಮೂಲಕ ರಾಜಕೀಯ ಪ್ರವೇಶಿಸಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ರಾಜಕಾರಣ ಮಾಡಿದ ಅವರು, ಅಂಬೇಡ್ಕರ್ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿರಲಿಲ್ಲ. ಕ್ಷೇತ್ರದಲ್ಲಿ ಎಲ್ಲ ಸಮಾಜದ ಜನರು ಶಾಂತಿಯಿಂದ ಬದುಕಬೇಕು ಎಂಬ ಆಶಯದೊಂದಿಗೆ ಆಡಳಿತ ನಡೆಸಿದ್ದರು. ಕುಟುಂಬ ರಾಜಕಾರಣಕ್ಕೆ ಅವರು ಅವಕಾಶ ನೀಡಿರಲಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ, ಮಾಜಿ ಜಿ.ಪಂ ಸದಸ್ಯ ಚಿಕ್ಕರಂಗನಾಯಕ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ ಸೇರಿದಂತೆ ಹಲವರು ಮಾತನಾಡಿದರು.

ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಎಜುಕೇಷನ್ ಮತ್ತು ಕಲ್ಚರಲ್ ಟ್ರಸ್ಟ್ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಶ್ರೀನಿವಾಸ್ ಪ್ರಸಾದ್, ಸಮಾಜ ಸೇವಕ ಪದ್ಮನಾಭರಾವ್, ಮಾಜಿ ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಕೆಂಪಣ್ಣ, ಮಾಜಿ ತಾಪಂ ಅಧ್ಯಕ್ಷ ಮಹದೇವಪ್ಪ, ಮಾಜಿ ತಾಪಂ ಸದಸ್ಯ ಬದನವಾಳು ರಾಮು, ನಗರಸಭೆ ಮಾಜಿ ಅಧ್ಯಕ್ಷ ಮಹದೇವಸ್ವಾಮಿ,

ಎಸ್. ಮಹದೇವಯ್ಯ, ಮಂಗಳ ಸೋಮಶೇಖರ್, ಸದಾನಂದ, ಕೆಂಡಗಣ್ಣಸ್ವಾಮಿ, ಶೈಲಾ ಬಾಲರಾಜ್, ಸಿದ್ದರಾಜು, ಮಹೇಶ್, ಹೆಮ್ಮರಗಾಲ ಸೋಮಣ್ಣ, ಅಬ್ದುಲ್ ರಜಾಕ್, ಡಾ. ರೇವಣ್ಣ, ಶೈಲೇಂದ್ರ, ಸುರೇಶ್ ಚಿನ್ನದಗುಡಿಹುಂಡಿ, ಶ್ರೀನಿವಾಸ ರೆಡ್ಡಿ, ಹುರ ಚಂದ್ರು, ಮಹದೇವ ಪ್ರಸಾದ್ ಸೇರಿದಂತೆ ಶ್ರೀನಿವಾಸ ಪ್ರಸಾದ್ ಅವರ ಅಭಿಮಾನಿಗಳು ಹಾಜರಿದ್ದರು.