ನಂಜನಗೂಡು: ಸರ್ಕಾರಿ ಕಛೇರಿಯಲ್ಲಿ ಗಂಟೆ 10: 30 ಆದ್ರೂ ಇನ್ನೂ ಬಾಗಿಲನ್ನು ತೆರೆದಿಲ್ಲ, ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದೆ ಇರುವುದರಿಂದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಕೆಳಗಡೆ ಇರುವ ಕಸಬಾ ಹೋಬಳಿಯ ನಾಡಕಛೇರಿಯ ಬಾಗಿಲು ಸಮಯ ಮೀರಿದರು ತೆರೆದಿಲ್ಲ. ಯಾವೊಬ್ಬ ಸಿಬ್ಬಂದಿಯಾಗಲಿ ಅಧಿಕಾರಿಗಳಾಗಲಿ, ಹಾಜರಾಗಿಲ್ಲ. ಪ್ರತಿದಿನವೂ ಇದೆ ಗೋಳು ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಬಾಗಿಲ ಮುಂದೆ ಸಾರ್ವಜನಿಕರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ದೂರದ ಗ್ರಾಮಗಳಿಂದ ಬೆಳಿಗ್ಗೆ ಬಂದು ಕಾದು ಕುಳಿತಿದ್ದಾರೆ.
ಯಾವುದೇ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಿಲ್ಲ. ವಿವಿಧ ದಾಖಲೆ ಮತ್ತು ಪ್ರಮಾಣ ಪತ್ರಕ್ಕಾಗಿ 15 ದಿನಗಳಿಂದ ಅಲೆದಾಡುತ್ತಿದ್ದೇನೆ. ಕೇಳಿದರೆ ಉಡಾಫೆಯಿಂದ ಉತ್ತರಿಸುತ್ತಾರೆ ಎಂದು ವೃದ್ಧೆಯೊಬ್ಬರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನಾದರೂ ಕ್ಷೇತ್ರದ ಇಬ್ಬರೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಜಡ್ಡು ಗಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.

