ನಂಜನಗೂಡು: ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಖಾಸಗಿ ಜಾಗದಲ್ಲಿ ಡಕ್ ನಿರ್ಮಾಣ ಮಾಡಲು ಬಂದ ನಂಜನಗೂಡು ನಗರಸಭಾ ಅಧಿಕಾರಿಗಳ ವಿರುದ್ಧ ಸ್ಥಳದಲ್ಲಿಯೇ ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಗೆ ಬೆದರಿದ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ತೆರಳಿದ ಘಟನೆ ನಂಜನಗೂಡು ಪಟ್ಟಣದ ಚಾಮಲಾಪುರ ಹುಂಡಿ ಗ್ರಾಮದಲ್ಲಿ ನಡೆದಿದೆ.
ನಂಜನಗೂಡು ನಗರದ ಚಾಮಲಾಪುರ ಹುಂಡಿ ಗ್ರಾಮದ ಸರ್ವೆ ನಂ. 220 ರಲ್ಲಿ ಬರುವ ಮರಮ್ಮ ಎಂಬುವವರಿಗೆ ಸೇರಿದ 2.15 ಗುಂಟೆ ಜಮೀನು ಇದಾಗಿದ್ದು, ಜಮೀನಿನ ಮೇಲೆ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲು ನಗರಸಭಾ ಆಯುಕ್ತರು ಮತ್ತು ಅಧಿಕಾರಿಗಳು ಮುಂದಾಗಿದ್ದರು. ಇದನ್ನು ಪ್ರಶ್ನಿಸಿ ನಂಜನಗೂಡಿನ ಸಿವಿಲ್ ನ್ಯಾಯಾಲಯದಲ್ಲಿ ಮರಮ್ಮ ದಾವೆ ಹೂಡಿದ್ದರು.
ನ್ಯಾಯಾಲಯದಿಂದ ತಡೆಯಾಜ್ಞ (ಸ್ಟೇ) ನೀಡಲಾಗಿದೆ. ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದರು, ಕೂಡ ನಂಜನಗೂಡಿನ ನಗರಸಭೆಯ ಆಯುಕ್ತಾರಾದ ಎಂ.ಬಸವರಾಜು, ಇಂಜಿನಿಯರ್ ಮಹೇಶ್ ಕುಮಾರ್ ಮತ್ತು ಅಧಿಕಾರಿಗಳು ಯಾವುದೇ ಮಾಹಿತಿಯನ್ನು ನೀಡದೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿಗಳ ಜೊತೆಗೂಡಿ ಏಕಾಏಕಿ ಬಂದು ನಮ್ಮ ಖಾಸಗಿ ಜಮೀನಿನ ಮೇಲೆ ರಸ್ತೆ ನಿರ್ಮಾಣ ಮಾಡಲು ಚರಂಡಿಯ ಮೇಲೆ ಡಕ್ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಇದರಿಂದ ರೊಚ್ಚಿಗೆದ್ದ ನಿವಾಸಿಗಳು ನಗರಸಭಾ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಸಮಯ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಯಿತು.

ನಮ್ಮ ಖಾಸಗಿ ಜಮೀನ ಮೇಲೆ ರಸ್ತೆ ಮಾಡುತ್ತಿದ್ದಾರೆ. ಆದರೆ, ಸರ್ಕಾರಿ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡಿರುವವರನ್ನು ಯಾರು ಕೇಳುತ್ತಿಲ್ಲ. ಪೊಲೀಸರನ್ನು ಕರೆದುಕೊಂಡು ಬಂದು ನಮಗೆ ದಬ್ಬಾಳಿಕೆ ಮಾಡುತ್ತಿದ್ದಾರೆ. ನಮ್ಮ 2.15 ಗುಂಟೆ ಜಮೀನನ್ನು ಅಳತೆ ಮಾಡಲು ಬಿಡುತ್ತಿಲ್ಲ. ರಾಜಕೀಯ ಮುಖಂಡ ನಮ್ಮ ಮೇಲೆ ಉದ್ದೇಶಪೂರ್ವಕವಾಗಿ ಅಧಿಕಾರಿಗಳನ್ನು ಕರೆದುಕೊಂಡು ಬಂದು ಈ ರೀತಿ ತೊಂದರೆ ಕೊಡುತ್ತಿದ್ದಾನೆ.
ಪದೇಪದೇ ನಮ್ಮ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ನಾವು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಕೂಡಲೇ ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡು ನಮಗೆ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ನಗರ ಸಭೆ ಕಾರ್ಯಾಲಯ ಮತ್ತು ಪೊಲೀಸ್ ಠಾಣೆ ಮುಂದೆ ಹೋರಾಟ ನಡೆಸಬೇಕಾಗುತ್ತದೆ ಎಂದು ಗಂಗಾಧರ್ ಸ್ವಾಮಿ, ಮಂಜುನಾಥ್, ರತ್ನಮ್ಮ, ಆನಂದ್, ರಾಜಮಣಿ, ಪ್ರದೀಪ್ ಎಚ್ಚರಿಕೆ ನೀಡಿದ್ದಾರೆ.

