ಮೈಸೂರು: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮಾನಸ ಗಂಗೋತ್ರಿಯ ಕುವೆಂಪು ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಯುವ ಸಂಭ್ರಮ ಇದೀಗ ಕಾರ್ಯಕ್ರಮದ ಉದ್ದೇಶಕ್ಕಿಂತ ಅಧಿಕಾರಿಗಳ ಫೋಟೋ–ರೀಲ್ಸ್‌ಗಳ ಕಾರಣಕ್ಕೆ ಚರ್ಚೆಗೆ ಗ್ರಾಸವಾಗಿದೆ.

ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಬೇಕಾದ ಯುವ ಸಂಭ್ರಮದಲ್ಲಿ ಯುವಕರಿಗಿಂತ ಅಧಿಕಾರಿಗಳದ್ದೇ ಹವಾ ಹೆಚ್ಚಾಗಿದೆ ಎಂಬ ಅಸಮಾಧಾನ ಕಾರ್ಯಕ್ರಮಕ್ಕೆ ಆಗಮಿಸಿರುವ ಯುವಕರಿಂದ ಕೇಳಿಬರುತ್ತಿದೆ. ಕಾರ್ಯಕ್ರಮದ ವೇಳೆ ಅಧಿಕಾರಿಗಳು ತಮ್ಮ ವೈಯಕ್ತಿಕ ಛಾಯಾಗ್ರಾಹಕರು ಹಾಗೂ ರೀಲ್ಸ್‌ ಸೃಷ್ಟಿಕರ್ತರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇದರಿಂದ ಯುವಕರ ಕಾರ್ಯಕ್ರಮವೇ ಅಧಿಕಾರಿಗಳ ಫೋಟೋಶೂಟ್ ಮತ್ತು ರೀಲ್ಸ್‌ ವೇದಿಕೆಯಾಗಿ ಮಾರ್ಪಟ್ಟಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಯುವಕರ ಸಂಭ್ರಮನಾ? ಅಧಿಕಾರಿಗಳ ಸೆಲ್ಫಿ ಸಂಭ್ರಮನಾ? ಎಂಬ ಪ್ರಶ್ನೆಯೂ ಇದೀಗ ಕೇಳಿಬರುತ್ತಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಯುವಕರಿಗಿಂತ ಅಧಿಕಾರಿಗಳ ಕ್ಯಾಮೆರಾ ತಂಡಗಳೇ ಹೆಚ್ಚು ಕಾಣಿಸುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುವ ಕಾರ್ಯಕ್ರಮದಲ್ಲಿ ಅಧಿಕಾರಿಗಳ ವೈಯಕ್ತಿಕ ಪ್ರಚಾರಕ್ಕೆ ಎಷ್ಟರ ಮಟ್ಟಿಗೆ ಅವಕಾಶ ನೀಡಲಾಗಿದೆ? ಕಾರ್ಯಕ್ರಮದ ವ್ಯವಸ್ಥೆ ಮತ್ತು ಯುವಕರ ಅನುಕೂಲಕ್ಕಿಂತ ಅಧಿಕಾರಿಗಳ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆಯೇ? ಎಂಬ ಪ್ರಶ್ನೆಗಳಿಗೂ ಉತ್ತರ ಸಿಗಬೇಕಿದೆ.

ಇದರ ಜೊತೆಗೆ ಪತ್ರಕರ್ತರಿಗಾಗಿ ಮೀಸಲಿರಿಸಿರುವ ಗ್ಯಾಲರಿ ಹೆಸರಿಗೆ ಮಾತ್ರ ಸೀಮಿತವಾಗಿದ್ದು, ಅಲ್ಲಿ ಸಿಬ್ಬಂದಿ, ಕುಟುಂಬಸ್ಥರು ಹಾಗೂ ಪರಿಚಿತರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಕಾರ್ಯಕ್ರಮದ ಸೌಕರ್ಯ ಹಾಗೂ ಆಸನ ವ್ಯವಸ್ಥೆಯಲ್ಲೂ ಮುಖ ಪರಿಚಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಒಟ್ಟಿನಲ್ಲಿ, ಮೇಲ್ನೋಟಕ್ಕೆ ತಳುಕು–ಒಳಗಡೆ ವ್ಯವಸ್ಥೆಯ ಬಗ್ಗೆ ಉಳುಕು ಎಂಬಂತಾಗಿರುವ ಯುವ ಸಂಭ್ರಮದಲ್ಲಿ ಯುವಕರಿಗೆ ಕೇಂದ್ರ ಸ್ಥಾನ ಸಿಗಬೇಕೋ ಅಥವಾ ಅಧಿಕಾರಿಗಳ ಪ್ರಚಾರಕ್ಕೆ ವೇದಿಕೆ ಸಿಗಬೇಕೋ ಎಂಬ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ. ಯುವ ಸಂಭ್ರಮದ ಹೆಸರಿನಲ್ಲಿ ನಡೆಯುತ್ತಿರುವ ಖರ್ಚು, ವ್ಯವಸ್ಥೆ ಹಾಗೂ ಅಧಿಕಾರಿಗಳ ಪ್ರಚಾರ ಚಟುವಟಿಕೆಗಳ ಕುರಿತು ಜಿಲ್ಲಾಡಳಿತ ಪಾರದರ್ಶಕವಾಗಿ ಮಾಹಿತಿ ನೀಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.