ನಂಜನಗೂಡು: ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಅಂಗಡಿ ನಿರ್ಮಾಣ ಮಾಡುತ್ತಿರುವುದಕ್ಕೆ ಮಾಜಿ ಶಾಸಕ ಬಿ. ಹರ್ಷವರ್ಧನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಮಾಜಿ ಶಾಸಕರು, ನಂಜನಗೂಡು ತಾಲ್ಲೂಕು ಕಛೇರಿ ಎಂದರೆ ಒಂದು ಗಂಭೀರತೆಯ ಸಂಕೇತ. ತಾಲ್ಲೂಕು ಆಡಳಿತ ಭವನ ತಾಲ್ಲೂಕು ಕಛೇರಿಯಾಗಿಯೇ ಉಳಿಯಬೇಕು. ಆಡಳಿತ ಭವನದ ಮುಂಭಾಗದಲ್ಲೇ ನಂದಿನಿ ಹಾಲಿನ ಪೆಟ್ಟಿಗೆ ಅಂಗಡಿ ನಿರ್ಮಾಣವಾಗುತ್ತಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಇವತ್ತು ನಂದಿನಿ ಹಾಲಿನ ಪೆಟ್ಟಿಗೆ ಅಂಗಡಿ ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಾರ್, ಐಸ್‌ಕ್ರೀಮ್ ಪಾರ್ಲರ್ ತೆರೆದರೂ ಆಶ್ಚರ್ಯವಿಲ್ಲ. ಇದು ನಂಜನಗೂಡಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿರುವುದಕ್ಕೆ ನಿದರ್ಶನವಾಗಿದೆ ಎಂದು ಬಿ.ಹರ್ಷವರ್ಧನ್ ಕಿಡಿಕಾರಿದರು.

ತಾಲ್ಲೂಕು ಕಛೇರಿಯು ಸಾವಿರಾರು ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಬರುವ ಸ್ಥಳ. ಇದು ಗಾಂಭೀರ್ಯದ ಸಂಕೇತವಾಗಿದೆ. ಇನ್ನಾದರೂ ತಾಲ್ಲೂಕು ಆಡಳಿತ ಹಾಗೂ ತಹಶೀಲ್ದಾರ್ ಅವರು ಎಚ್ಚೆತ್ತುಕೊಂಡು ಮುಂಭಾಗದಲ್ಲಿ ನಿರ್ಮಿಸುತ್ತಿರುವ ನಂದಿನಿ ಹಾಲಿನ ಪೆಟ್ಟಿಗೆ ಅಂಗಡಿಯನ್ನು ತಕ್ಷಣ ತೆರವುಗೊಳಿಸಬೇಕು ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಒತ್ತಾಯಿಸಿದರು. ಇನ್ನು ಸಾರ್ವಜನಿಕ ವಲಯದಲ್ಲಿ ಈ ಬೆಳವಣಿಗೆ ಚರ್ಚೆಗೆ ಗ್ರಾಸವಾಗಿದ್ದು, ತಾಲ್ಲೂಕು ಆಡಳಿತ ಏನು ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.