ನಂಜನಗೂಡು: ತಾಲ್ಲೂಕಿನ ದೊಡ್ಡಕವಲಂದೆ ಹೋಬಳಿಯ ಚಿಕ್ಕಹೊಮ್ಮ ಗ್ರಾಮದಲ್ಲಿ ಕರೆಂಟ್ ಬಿಲ್ ವಿಚಾರಕ್ಕೆ ಚೆಸ್ಕಾಂ ಸಿಬ್ಬಂದಿಗಳು ವೃದ್ಧೆ ಮೇಲೆ ಯಾವುದೇ ದೌರ್ಜನ್ಯ ಎಸಗಿಲ್ಲ. ಇದು ಸತ್ಯಕ್ಕೆ ದೂರವಾದ ಆರೋಪ ಎಂದು ನಂಜನಗೂಡು ಚೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಆನಂದ್ ಸ್ಪಷ್ಟಣೆ ನೀಡಿದ್ದಾರೆ.
ನಂಜನಗೂಡು ನಗರದ ಚೆಸ್ಕಾಂ ಕಛೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿಕ್ಕಹೊಮ್ಮ ಗ್ರಾಮದಲ್ಲಿ ನಮ್ಮ ಇಲಾಖೆ ಸಿಬ್ಬಂದಿಗಳು ಈ ಹಿಂದೆ ವೃದ್ಧೆ ಮಹದೇವಮ್ಮ ರವರ ಮನೆಗೆ ಭಾಗ್ಯ ಜ್ಯೋತಿ ಮೀಟರ್ ಅಳವಡಿಸಲಾಗಿತ್ತು. ಆದರೆ, ಅವರದ್ದೇ ಮನೆಯ ಬೇರೊಂದು ಮನೆಗೆ ಅನಧಿಕೃತವಾಗಿ ಈ ಮೀಟರ್ ಅಳವಡಿಸಿಕೊಂಡು ವಿದ್ಯುತ್ ಸಂಪರ್ಕವನ್ನು ತೆಗೆದುಕೊಂಡಿದ್ದರು.
ಈ ವಿಚಾರವಾಗಿ ನೌಕರರು ಕೇಳಲು ಹೋದ ಸಂದರ್ಭದಲ್ಲಿ ಅಜ್ಜಿಗೆ ಯಾವುದೇ ತಳ್ಳಾಟ ನೂಕಾಟ ನಡೆಸಿಲ್ಲ. ಅಜ್ಜಿಗೆ ಯಾವುದೇ ಗಾಯಗಳಾಗಿಲ್ಲ. ಈ ವಿಚಾರವಾಗಿ ಅಜ್ಜಿಯಾಗಲಿ ಅಥವಾ ಅವರ ಮಗಳಾಗಲಿ ಹೇಳಿಕೆ ನೀಡಿಲ್ಲ. ಆಸ್ಪತ್ರೆಯಲ್ಲಿ ಯಾರೋ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ತಾವೇ ಮಾತಾಡಿದ್ದಾರೆ.
ಇದನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಸುದ್ದಿ ಪ್ರಸಾರ ಮಾಡಲಾಗಿದೆ. ಸುಳ್ಳು ಮಾಹಿತಿಯನ್ನು ಅಪಪ್ರಚಾರ ಮಾಡಿದ್ದಾರೆ. ತಕ್ಷಣವೇ ನಾವು ಗ್ರಾಮಕ್ಕೆ ತೆರಳಿ ತೆಗೆದುಹಾಕಲಾಗಿದ್ದ ಮೀಟರ್ ಮತ್ತೆ ಅಳವಡಿಸಿ, ವಿದ್ಯುತ್ ಪುನರ್ ಸಂಪರ್ಕವನ್ನು ಕಲ್ಪಿಸಲಾಗಿದೆ.
ಈ ಅನಧಿಕೃತ ಮಾಪಕ ಬದಲಾವಣೆಯನ್ನು ಪ್ರಶ್ನಿಸುತ್ತಿದ್ದಕ್ಕಾಗಿ ಕೆಲವು ವ್ಯಕ್ತಿಗಳು ದುರುದ್ದೇಶದಿಂದ ಅಜ್ಜಿಯನ್ನು ತಳ್ಳಿದ್ದರು ವಿಕೃತಿ ಮೆರೆದು, ಹಣ ಪಡೆದುಕೊಂಡರು ಎಂದು ಆಧಾರ ರಹಿತ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ವೃದ್ಧೆಯನ್ನು ತಳ್ಳಿದರು ಹಣ ಪಡೆದುಕೊಂಡರು ಎಂಬುದು ಸಂಪೂರ್ಣ ಸುಳ್ಳು ಆರೋಪವಾಗಿದೆ.
ಜೊತೆಗೆ ಯಾವುದೇ ಕರೆಂಟ್ ಬಿಲ್ ಬಾಕಿ ಇರುವುದಿಲ್ಲ. ಬಿಲ್ ಕಲೆಕ್ಟರ್ ಯಾವುದೇ ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಾದ ಕಿರಣ್ ಕುಮಾರ್, ದೇವರಾಜಯ್ಯ ಹಾಜರಿದ್ದರು.

