ನಂಜನಗೂಡು: ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳೇ ಕಳೆದರು ರಾಜ್ಯ ಮುಖ್ಯಮುಂತ್ರಿ ಸಿದ್ದರಾಮಯ್ಯರವರ ತವರು ಜಿಲ್ಲೆಯಲ್ಲಿಯೇ ಇನ್ನೂ ಬೆಳಕಿನ ಭಾಗ್ಯ ಕಂಡಿಲ್ಲ ಎಂದು ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಟ್ಟವಾಡಿ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದ ವಿದ್ಯುತ್ ದೀಪವಿಲ್ಲದೆ ನಿವಾಸಿಗಳು ಪರದಾಡುತ್ತಿರುವ ಬಗ್ಗೆ ನಿಮ್ಮ ನ್ಯೂಸ್ ಕರ್ನಾಟಕ ವಾಹಿನಿಯಲ್ಲಿ ಸುದ್ದಿಯನ್ನು ಪ್ರಸಾರ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಕೊನೆಗೂ ನಿವಾಸಿಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿದ್ದಾರೆ ಇದು ನ್ಯೂಸ್ ಕರ್ನಾಟಕ ವರದಿಯ ಫಲಶೃತಿಯಾಗಿದೆ.
ಗಟ್ಟವಾಡಿ ಗ್ರಾಮದ ಜನತಾ ಕಾಲೋನಿಯಲ್ಲಿ ಸುಮಾರು 15 ವರ್ಷಗಳಿಂದ ವಿದ್ಯುತ್ ದೀಪ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ ಮತ್ತು ಮೇಣದ ಬತ್ತಿಯನ್ನು ಹಚ್ಚಿಕೊಂಡು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ವಿದ್ಯುತ್ ಕಂಬಗಳನ್ನು ಕಲ್ಪಿಸುವಂತೆ 15 ವರ್ಷಗಳಿಂದ ಗ್ರಾಮಸ್ಥರು ಕಚೇರಿಗಳಿಗೆ ಅಲೆದಾಡಿದ್ದರು.
ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ನಿಮ್ಮ ನ್ಯೂಸ್ ಕರ್ನಾಟಕ ವಾಹಿನಿಯಲ್ಲಿ ಜುಲೈ 3 ರಂದು ಸುದ್ದಿಯನ್ನು ಪ್ರಸಾರ ಮಾಡಿದ ಪರಿಣಾಮ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಚೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸುಮಾರು 9 ವಿದ್ಯುತ್ ಕಂಬಗಳನ್ನು ನೆಟ್ಟು ವಿದ್ಯುತ್ ಸಂಪರ್ಕವನ್ನು ಕಲ್ಪಿಸಿದ್ದಾರೆ. ಇದರಿಂದ ಸಂತಸ ವ್ಯಕ್ತಪಡಿಸಿದ ನಿವಾಸಿಗಳು ವಾಹಿನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

