ನಂಜನಗೂಡು: ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದ ನಂಜನಗೂಡಿನ ದೇಬೂರು ಸರ್ಕಾರಿ ಆದರ್ಶ ಪದವಿಪೂರ್ವ ಕಾಲೇಜಿನ ಅವ್ಯವಸ್ಥೆ ಕುರಿತು ನ್ಯೂಸ್ ಕರ್ನಾಟಕ ವರದಿ ಪ್ರಸಾರ ಮಾಡಿದ್ದಕ್ಕೆ ಇದೀಗ ಬಿಗ್ ಇಂಪ್ಯಾಕ್ಟ್ ಕಂಡುಬಂದಿದೆ.

ನ್ಯೂಸ್ ಕರ್ನಾಟಕ ವರದಿ ಪ್ರಸಾರವಾದ ಬೆನ್ನಲ್ಲೇ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ನಾಗಮ್ಮ ಅವರು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಾಲೇಜಿನ ಅವ್ಯವಸ್ಥೆ ಕಂಡು ಪ್ರಾಂಶುಪಾಲರ ವಿರುದ್ಧ ಗರಂ ಆದ ಅವರು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದರು.

ಕಾಲೇಜಿನಲ್ಲಿ ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿಲ್ಲ, ಕುಡಿಯುವ ನೀರಿನ ಸಮಸ್ಯೆ, ಗ್ರಂಥಾಲಯದ ಕೊರತೆ, ಪ್ರಯೋಗಾಲಯದಲ್ಲಿ ಅಗತ್ಯ ಸಲಕರಣೆಗಳಿಲ್ಲ ಸೇರಿದಂತೆ ಹಲವು ಸಮಸ್ಯೆಗಳು ಇರುವುದನ್ನು ವಿದ್ಯಾರ್ಥಿಗಳು ಡಿಡಿಪಿಯು ಅವರ ಗಮನಕ್ಕೆ ತಂದರು.

ಇಷ್ಟೇ ಅಲ್ಲದೆ, ಕಾಲೇಜು ಅಭಿವೃದ್ಧಿ ಸಮಿತಿ ರಚನೆಯಾಗದಿದ್ದರೂ ವಿದ್ಯಾರ್ಥಿಗಳಿಂದ ₹800 ಶುಲ್ಕ ಸಂಗ್ರಹಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಬಗ್ಗೆಯೂ ವಿದ್ಯಾರ್ಥಿಗಳು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.

ಡಿಡಿಪಿಯು ನಾಗಮ್ಮ ಅವರ ಮುಂದೆ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಂಡರು. “ನಮಗೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ. ಕುಡಿಯುವ ನೀರಿಲ್ಲ. ಶೌಚಾಲಯ ಸರಿಯಾಗಿಲ್ಲ. ಪ್ರಯೋಗಾಲಯದಲ್ಲಿ ಸಲಕರಣೆಗಳಿಲ್ಲ” ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ಕಾಲೇಜಿನ ಆಡಳಿತ ವ್ಯವಸ್ಥೆ ಬಗ್ಗೆಯೂ ವಿದ್ಯಾರ್ಥಿಗಳು ಅಸಮಾಧಾನ ಹೊರಹಾಕಿ, ಪ್ರಾಂಶುಪಾಲರನ್ನು ಬದಲಾವಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಡಿಡಿಪಿಯು ನಾಗಮ್ಮ, “ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾದ ಬಳಿಕ ಕಾಲೇಜಿನ ಅವ್ಯವಸ್ಥೆ ನನ್ನ ಗಮನಕ್ಕೆ ಬಂದಿದೆ. ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ” ಎಂದು ಹೇಳಿದರು. ಶೌಚಾಲಯವನ್ನು ದುರಸ್ತಿ ಮಾಡಲಾಗುತ್ತಿದೆ. ತರಗತಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಸ್ವಚ್ಛತೆ ಮಾಡುವಂತೆ ಸೂಚಿಸಲಾಗಿದೆ. ಮುರಿದಿರುವ ಬಾಗಿಲುಗಳನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.

ಪ್ರಯೋಗಾಲಯದಲ್ಲಿ ಅಗತ್ಯ ಸಲಕರಣೆಗಳಿಲ್ಲದಿರುವುದನ್ನು ಸರ್ಕಾರದ ಗಮನಕ್ಕೆ ತಂದು ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು.

₹800 ಶುಲ್ಕದ ಬಗ್ಗೆ ಪರಿಶೀಲನೆ

ಕಾಲೇಜು ಅಭಿವೃದ್ಧಿ ಸಮಿತಿ ರಚನೆ ಮಾಡದೆ ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸಿರುವುದು ತಪ್ಪು ಎಂದು ಡಿಡಿಪಿಯು ಸ್ಪಷ್ಟಪಡಿಸಿದರು. “ಕಾಲೇಜು ಅಭಿವೃದ್ಧಿ ಸಮಿತಿ ರಚನೆ ಮಾಡದೆ ಶುಲ್ಕ ತೆಗೆದುಕೊಳ್ಳಬಾರದು. ಸಂಗ್ರಹಿಸಿರುವ ಹಣ ಎಲ್ಲಿಗೆ ಹೋಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು” ಎಂದು ಹೇಳಿದರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ರಚಿಸಿ ವಾರ್ಷಿಕ ಶಿಬಿರ ಆಯೋಜಿಸುವಂತೆ ಸೂಚಿಸಲಾಗುವುದು ಎಂದು ನಾಗಮ್ಮ ತಿಳಿಸಿದರು.

ಪ್ರಾಂಶುಪಾಲರ ವಿರುದ್ಧ ಸೂಕ್ತ ಕ್ರಮ?

ಪ್ರಾಂಶುಪಾಲರು ಎರಡು ಕಡೆ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಡಿಡಿಪಿಯು ಹೇಳಿದರು. ಈಗಾಗಲೇ ಪ್ರಾಂಶುಪಾಲರು ತಮಗೆ ಯಾವುದಾದರೂ ಒಂದು ಕಾಲೇಜಿನಲ್ಲಿ ಮಾತ್ರ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ನಂಜನಗೂಡು ತಾಲೂಕಿನಲ್ಲಿ ಹುರಾ, ಹುಲ್ಲಹಳ್ಳಿ ಹಾಗೂ ಆದರ್ಶ ಪಿಯು ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರ ಕೊರತೆ ಇರುವುದರಿಂದ ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿವೆ.

ಈ ಕುರಿತು ಶಾಸಕ ದರ್ಶನ್ ಧ್ರುವನಾರಾಯಣ್ ಅವರೊಂದಿಗೆ ಚರ್ಚಿಸಿ ಪ್ರಾಂಶುಪಾಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಯು ನಾಗಮ್ಮ ಭರವಸೆ ನೀಡಿದರು. ಒಟ್ಟಿನಲ್ಲಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಯಲಿಗೆಳೆದ ನ್ಯೂಸ್ ಕರ್ನಾಟಕ ವರದಿಯ ಬೆನ್ನಲ್ಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ನಿರೀಕ್ಷೆ ಮೂಡಿಸಿದೆ. ಇದೀಗ ಅಧಿಕಾರಿಗಳು ನೀಡಿರುವ ಭರವಸೆಗಳು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.