ನಂಜನಗೂಡು: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ಪ್ರಸಿದ್ಧ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಆದರೆ ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಭಕ್ತರು ಗಂಟೆಗಟ್ಟಲೆ ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುಗಮವಾಗಿ ದೇವರ ದರ್ಶನ ಪಡೆದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ನಂಜನಗೂಡು ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಶ್ರೀಕಂಠೇಶ್ವರ ಸ್ವಾಮಿ ವ್ಯವಸ್ಥಾಪನಾ ಸಮಿತಿ ಸಭೆಯು ಶಾಸಕ ದರ್ಶನ್ ಧ್ರುವನಾರಾಯಣ್ ನೇತೃತ್ವದಲ್ಲಿ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೇವಾಲಯದ ಸಮಗ್ರ ಅಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

ಬಳಿಕ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ದೇವಾಲಯಕ್ಕೆ ಆರ್ಚ್ ನಿರ್ಮಾಣ, ಬೆಳ್ಳಿರಥ ಕಾಮಗಾರಿ, ಮಳಿಗೆಗಳ ಬಾಡಿಗೆ, ಅನ್ನದಾಸೋಹ, ಸ್ವಚ್ಛತೆ ಹಾಗೂ ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. 2.91 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಬೆಳ್ಳಿರಥ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

ದೇವಾಲಯದ ಆವರಣ, ನದಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಲು ಭಕ್ತರು ಮತ್ತು ಸಾರ್ವಜನಿಕರು ಸಹಕರಿಸಬೇಕು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗೆ ಸುಗಮ ದರ್ಶನ, ಉತ್ತಮ ಗುಣಮಟ್ಟದ ಪ್ರಸಾದ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಇದೇ ವೇಳೆ 2024-25ರ ಅವಧಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಹಾಗೂ ಒಂದೇ ಸ್ಥಳದಲ್ಲಿ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ಸಭೆಯಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸವೇಗೌಡ, ನಗರಸಭಾ ಪೌರಾಯುಕ್ತ ಬಸವರಾಜ್, ಸಮಿತಿಯ ಸದಸ್ಯರಾದ ಗೋವಿಂದರಾಜು, ಗೋಪಾಲಕೃಷ್ಣ, ಶ್ರೀಧರ್, ಮಹೇಶ್, ಮಹದೇವಮ್ಮ, ನಂಜುಮಣಿ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.