ಮೈಸೂರು: ಮೈಸೂರಿನ ಪಾರಂಪರಿಕ ಹೆಗ್ಗುರುತುಗಳಲ್ಲಿ ಒಂದಾದ ದೊಡ್ಡ ಗಡಿಯಾರದ ನವೀಕರಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, 20 ದಿನಗಳಲ್ಲಿ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
94 ವರ್ಷಗಳ ಇತಿಹಾಸವಿರುವ ದೊಡ್ಡ ಗಡಿಯಾರ ಕಟ್ಟಡ ಶಿಥಿಲವಾಗಿದ್ದಲ್ಲದೇ, ಗಡಿಯಾರವೂ ಕೆಟ್ಟಿತ್ತು. ಈ ಹಿನ್ನೆಲೆ ಮೈಸೂರು ಮಹಾನಗರ ಪಾಲಿಕೆ ಸುಮಾರು 42 ಲಕ್ಷ ರೂ. ಅನುದಾನದಲ್ಲಿ 2023ರ ಆಗಸ್ಟ್ ತಿಂಗಳಿನಿಂದ ನವೀಕರಣ ಕಾರ್ಯ ಆರಂಭಿಸಿತ್ತು. ಪಾರಂಪರಿಕ ದೊಡ್ಡ ಗಡಿಯಾರ ಕಟ್ಟಡ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ಆರಂಭವಾದ ನವೀಕರಣ ಕಾರ್ಯ ಬಹುತೇಕ ಮುಕ್ತಾಯಗೊಂಡಿದ್ದು, ಮಳೆ ಬಿಡುವು ನೀಡಿದರೆ 15-20 ದಿನಗಳಲ್ಲಿ ಕಾಮಗಾರಿ ಸಂಪೂರ್ಣವಾಗಲಿದೆ.
1927ರ ಆಗಸ್ಟ್ 8ರಂದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ 25ನೇ ವರ್ಷದ ಸವಿನೆನಪಿಗಾಗಿ ಪುರಭವನದ ಎದುರು 75 ಅಡಿ ಎತ್ತರದ ಈ ಪಾರಂಪರಿಕ ದೊಡ್ಡ ಗಡಿಯಾರ ನಿರ್ಮಾಣ ಕಾರ್ಯಾರಂಭವಾಯಿತು. ಕ್ಲಾಕ್ ಟವರ್ನ ನಾಲ್ಕು ಕಡೆಯಲ್ಲೂ ವೃತ್ತಾಕಾರದ ಗಡಿಯಾರವಿದ್ದು, ಕನ್ನಡ ಅಂಕಿಗಳ ಬಳಕೆಯೊಂದಿಗೆ ಭಾಷಾಭಿಮಾನ ಬಿಂಬಿಸುವಂತೆ ನಿರ್ಮಿಸಲಾಗಿತ್ತು. ಪ್ರತಿ ಗಂಟೆಗೊಮ್ಮೆ ಗಡಿಯಾರದ ಗಂಟೆ ಶಬ್ಧ 5 ಕಿ.ಮೀ. ವರೆಗೆ ಕೇಳಿಸುತ್ತಿತ್ತು. ಕಾಲ ಕ್ರಮೇಣ ಈ ಗಡಿಯಾರ ದುರಸ್ತಿಗೊಳಗಾಗಿದ್ದು, 1990ರ ನಂತರ ಗಡಿಯಾರ ತನ್ನ ಶಬ್ಧವನ್ನು ನಿಲ್ಲಿಸಿತಾದರೂ, ಸಮಯವನ್ನು ಮಾತ್ರ ಸರಿಯಾಗಿ ತೋರಿಸುತ್ತಿತ್ತು. ಕ್ರಮೇಣ ಗಡಿಯಾರವೂ ಕೆಟ್ಟಿತ್ತು.
ಪಾರಂಪರಿಕ ದೊಡ್ಡ ಗಡಿಯಾರ ನವೀಕರಣಕ್ಕೆ ಸುಣ್ಣದ ಗಾರೆ ಹಾಗೂ ನದಿ ತಟದ ಮರಳು ಬಳಕೆ ಮಾಡಲಾಗಿದೆ. ನೆಲದಲ್ಲಿ ಹೆಗ್ಗಣಗಳು ಕೊರೆದಿದ್ದ ಜಾಗವನ್ನು ಮುಚ್ಚಲು ಎಂ-ಸ್ಯಾಂಡ್ ಬಳಕೆ ಮಾಡಲಾಗಿದೆ. ಮೈಸೂರು ಪೋಸ್ಟಲ್ ಟ್ರೈನಿಂಗ್ (ಅಂಚೆ ಪ್ರಶಿಕ್ಷಣ) ಕಾಲೇಜಿನಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಯಲ್ಲಿಯೂ ಸುಣ್ಣದ ಗಾರೆ ಬಳಸುತ್ತಿದ್ದು, ಅಲ್ಲಿಂದಲೇ ಸುಣ್ಣದ ಗಾರೆ ತಂದು ದೊಡ್ಡ ಗಡಿಯಾರಕ್ಕೆ ಬಳಸಲಾಗುತ್ತಿದೆ.
ಜಯಲಕ್ಷ್ಮಿ ಪ್ಯಾಲೆಸ್ ಸಂರಕ್ಷಣೆ ಕಾರ್ಯದಲ್ಲಿರುವ ಡೆಕ್ಕನ್ ಹೆರಿಟೇಜ್ ಅವರ ಸಲಹೆ ಸೇರಿದಂತೆ ಮೈಸೂರಿನ ಪಾರಂಪರಿಕ ತಜ್ಞರ ಸಲಹೆಯನ್ನು ಪಡೆದು ದೊಡ್ಡ ಗಡಿಯಾರ ಸಂರಕ್ಷಣೆ ಮಾಡಲಾಗಿದೆ. ಪಾರಂಪರಿಕ ಶೈಲಿಗೆ ಕಿಂಚಿತ್ತೂ ಧಕ್ಕೆ ಬಾರದಂತೆ ಸಂರಕ್ಷಣಾ ಕಾಮಗಾರಿ ನಡೆದಿದೆ. ಅದೇ ರೀತಿ ಪೂರ್ಣಗೊಳ್ಳಲಿದೆ. ಕ್ಲಾಕ್ ಟವರ್ ನ ಕಿಟಕಿ, ಗಾಜುಗಳು, ಫ್ರೇಂ, ಶಟ್ಟರ್ಗಳು, ಪ್ಲಾಟ್ ಫಾರಂ ಮೇಲಿನ ಕಲ್ಲಿನ ನೆಲಹಾಸುಗಳನ್ನು ನಿಗದಿಪಡಿಸಿರುವ ಸಲಕರಣೆಗಳನ್ನೇ ಬಳಸಿಕೊಂಡು ಸಂರಕ್ಷಣೆ ಮಾಡಲಾಗಿದೆ ಎಂದು ಪುರಾತತ್ವ, ವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯ ಆಯುಕ್ತ ಎ.ದೇವರಾಜು ತಿಳಿಸಿದ್ದಾರೆ.
ದೊಡ್ಡ ಗಡಿಯಾರ ಕಟ್ಟಡದಲ್ಲಿನ ಗಡಿಯಾರದ ನಿರ್ವಹಣೆ ಹೊಣೆ ಪಾಲಿಕೆ ಮೇಲಿದೆ. ಈ ಮೊದಲೇ ಗಡಿಯಾರ ನಿಂತಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತೆ ನಡೆಯುವಂತೆ ಮಾಡಲಿದ್ದಾರೆ. ಗಡಿಯಾರದ ನಿರ್ವಹಣೆಯ ಜವಾಬ್ದಾರಿಯನ್ನು ಈಗಾಗಲೇ ಪಾಲಿಕೆ ತಜ್ಞರಿಗೆ ವಹಿಸಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೊಂದೆಡೆ ದೊಡ್ಡ ಗಡಿಯಾರ ನವೀಕರಣ ಕಾರ್ಯ ಸರಿಯಾದ ರೀತಿಯಲ್ಲಿ ಆಗಿಲ್ಲ. ಕೆಲ ಭಾಗದಲ್ಲಿ ಹೆಗ್ಗಣಗಳು ಕೊರೆದಿದ್ದ ಜಾಗವನ್ನು ಚಪ್ಪಡಿ ಕಲ್ಲುಗಳನ್ನು ಹಾಕಿ ಮುಚ್ಚಿದ್ದಾರೆ. ಇದರ ಬದಲು ಲಾನ್ ಮಾಡಬಹುದಿತ್ತು. ಆದರೆ ಎಂ-ಸ್ಯಾಂಡ್-ಸಿಮೆಂಟ್ ಬಳಸಿ ಮುಚ್ಚಿದ್ದಾರೆ. ಅಲ್ಲದೆ ದೊಡ್ಡ ಗಡಿಯಾರದ ಸುತ್ತಲೂ ಇದ್ದ ಗೋಡೆ ಸಂರಕ್ಷಣೆಗೂ ಎಂ-ಸ್ಯಾಂಡ್ ಬಳಕೆ ಮಾಡಿದ್ದಾರೆ. ಹಳೆ ಸುಣ್ಣದ ಗಾರೆಗೆ ಎಂ-ಸ್ಯಾಂಡ್ ಹೊಂದಿಕೊಳ್ಳುವುದಿಲ್ಲ ಎಂದು ಹೇಳಿದರೂ ಗುತ್ತಿಗೆದಾರರು ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಪಾರಂಪರಿಕ ತಜ್ಞ ಪ್ರೊ.ಎನ್.ಎಸ್.ರಂಗರಾಜು ಬೇಸರ ವ್ಯಕ್ತಪಡಿಸಿದ್ದಾರೆ.

