ನಂಜನಗೂಡು: ಪ್ರೀತಿಸಿ ಮದುವೆ ಆದ ಹುಡುಗಿಗೆ ವಿಚಾರಣೆ ನೆಪದಲ್ಲಿ ಬೆದರಿಸಿ 10 ಸಾವಿರ ವಸೂಲಿ ಮಾಡಿದ್ದಾರೆಂದು ನಂಜನಗೂಡು ಗ್ರಾಮಾಂತರ ಠಾಣೆಯ ಪಿಎಸ್ಐ ಸುನೀಲ್ ಕುಮಾರ್ ಮೇಲೆ ಗಂಭೀರ ಆರೋಪ ಹೊರಿಸಲಾಗಿದೆ.

ನೊಂದ ಯುವತಿ ನ್ಯಾಯಕ್ಕಾಗಿ ಕೆಆರ್ ಎಸ್ ಪಕ್ಷದ ಮುಖ್ಯಸ್ಥರ ಮೊರೆ ಹೋಗಿದ್ದಾಳೆ. ಪಕ್ಷದ ಮುಖಂಡರು ನಂಜನಗೂಡು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಪಿಎಸ್ಐ ಸುನೀಲ್ ಕುಮಾರ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಕ್ರಮ ಕೈಗೊಳ್ಳಲು ನಿರ್ಲಕ್ಷಿಸಿದ್ದಾರೆಂದು ಡಿವೈಎಸ್ಪಿ ರಘು ರವರ ವಿರುದ್ದವೂ ಆರೋಪಿಸಲಾಗಿದೆ.

ನಂಜನಗೂಡು ತಾಲೂಕಿನ ಎಚಗಳ್ಳಿಯ ಯುವತಿ ವಯಸ್ಸು 18 ಆಗಿದ್ದು ವಯಸ್ಕಳಾಗಿ ತಾನು ಪ್ರೀತಿಸಿದ ಹುಡುಗನನ್ನ ಕೆಲವು ದಿನಗಳ ಹಿಂದೆ ಕಾನೂನುಬದ್ದವಾಗಿ ಮದುವೆ ಆಗಿ ನೊಂದಾಯಿಸಿಕೊಂಡಿದ್ದಾಳೆ.ಈ ಬಗ್ಗೆ ಯುವತಿ ಪೋಷಕರು ದೂರು ನೀಡಿದ್ದ ಹಿನ್ನಲೆ ವಿಚಾರಣೆ ನಡೆಸುವ ನೆಪದಲ್ಲಿ ಗ್ರಾಮಾಂತರ ಠಾಣೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಯುವತಿಯನ್ನ ಠಾಣೆಗೆ ಕರೆಸಿಕೊಂಡಿದ್ದಾರೆ. ನಂತರ ಗಂಡನ ವಿರುದ್ದ ಪೋಕ್ಸೋ ಪ್ರಕರಣ ದಾಖಲಿಸುವುದಾಗಿ ಹೆದರಿಸಿದ್ದು, ಮಾವನ ಬಳಿ 10 ಸಾವಿರ ಹಣ ಪಡೆದಿದ್ದಾರೆಂದು ಕೆಆರ್ ಎಸ್ ಪಕ್ಷಕ್ಕೆ ಯುವತಿ ಕೊಟ್ಟ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಅನ್ವಯದಂತೆ ಕೆಆರ್ ಎಸ್ ಪಕ್ಷದ ಮುಖಂಡರು ಯುವತಿಗೆ ನ್ಯಾಯ ಒದಗಿಸಲು ಯತ್ನಿಸಿದಾಗ ಪೊಲೀಸರು ಸೂಕ್ತವಾಗಿ ಸ್ಪಂದಿಸಿಲ್ಲವೆಂದು ಆರೋಪಿಸಿದ್ದಾರೆ. ಕ್ರಮ ಕೈಗೊಳ್ಳದ ಡಿವೈಎಸ್ಪಿ ರಘು ಹಾಗೂ ಹಣ ಪಡೆದ ಪಿಎಸ್ಐ ಸುನಿಲ್ ಕುಮಾರ್ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆ.ಆರ್.ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್, ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ರವೀಂದ್ರ, ತಾಲ್ಲೂಕು ಅಧ್ಯಕ್ಷ ಮಣಿಕಂಠ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.