ನಂಜನಗೂಡು: ಕ್ಯೂಆರ್ ಕೋಡ್ ಮೂಲಕ ಸಾರ್ವಜನಿಕರಿಂದ ಬಂದಿರುವ ದೂರುಗಳನ್ನು ಕೂಡಲೇ ಇತ್ಯರ್ಥ ಗೊಳಿಸುವಂತೆ ನಗರಸಭಾ ಅಧಿಕಾರಿಗಳಿಗೆ ಶಾಸಕ ದರ್ಶನ್ ಧ್ರುವ ನಾರಾಯಣ್ ಸೂಚಿಸಿದ್ದಾರೆ.
ನಂಜನಗೂಡು ನಗರದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಶಾಸಕರ ಕಛೇರಿಯಲ್ಲಿ ನಂಜನಗೂಡು ನಗರ ಸಭೆಯ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ನೂತನ ಪೌರಾಯುಕ್ತ ಎಂ.ಬಸವರಾಜು ಮತ್ತು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿ ಕ್ಯೂಆರ್ ಕೋಡ್ ಮೂಲಕ ಬರುವ ಎಲ್ಲಾ ಸಮಸ್ಯೆಗಳಿಗೆ ಶೀಘ್ರವೇ ಬಗೆಹರಿಸುವಂತೆ ತಾಕೀತು ಮಾಡಿದರು.
ದೇಶದಲ್ಲಿಯೇ ಮೊದಲ ಬಾರಿಗೆ ನಂಜನಗೂಡು ನಗರಸಭೆಯಲ್ಲಿ ನಗರ ವ್ಯಾಪ್ತಿಯ ವಾರ್ಡ್ ಗಳ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಕ್ಯೂಆರ್ ಕೋಡ್ ಸೌಲಭ್ಯಗಳನ್ನು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಜಾರಿ ಮಾಡಲಾಗಿತ್ತು. ಕ್ಯೂ ಆರ್ ಕೋಡ್ ಮೂಲಕ ಸಾಕಷ್ಟು ಸಮಸ್ಯೆಗಳು ಮತ್ತು ದೂರುಗಳು ಬಂದಿವೆ. ನಮ್ಮ ವ್ಯಾಪ್ತಿಯಲ್ಲಿಯೇ ತುರ್ತು ಗತಿಯಲ್ಲಿ ಕೆಲವು ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ.

ಇನ್ನು ಕೆಲವು ಪ್ರಮುಖ ಕಠಿಣ ಸಮಸ್ಯೆಗಳ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಒಟ್ಟಾರೆಯಾಗಿ ನಂಜನಗೂಡು ನಗರದಲ್ಲಿ ಜಾರಿ ಮಾಡಿರುವ ಕ್ಯೂಆರ್ ಕೋಡ್ ಸೌಲಭ್ಯ ಸಾಕಷ್ಟು ಅನುಕೂಲಕರವಾಗಿದೆ. ಜನರ ಸೇವೆ ಮಾಡದೆ ಕಾಲಹರಣ ಮಾಡುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಚುರುಕು ಕಾರ್ಯವೈಕರಿಗೆ ಇದೊಂದು ಉತ್ತಮವಾದ ಯೋಜನೆಯಾಗಿದೆ. ಸಾರ್ವಜನಿಕರ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ತುರ್ತಾಗಿ ನಿಂತ ಸ್ಥಳದಲ್ಲಿ ಕ್ಯೂಆರ್ ಕೋಡ್ ಬಳಸಿ ಸಮಸ್ಯೆಗಳನ್ನು ಲೀಲಾಜಾಲವಾಗಿ ತಿಳಿಸಬಹುದು ತಕ್ಷಣದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪರಿಹಾರವನ್ನು ಕೂಡ ಕಂಡುಕೊಳ್ಳಬಹುದಾಗಿದೆ.
ಇನ್ನು ದೂರು ನೀಡುವ ಸಾರ್ವಜನಿಕರು ತಪ್ಪದೆ ತಮ್ಮ ವಿಳಾಸ ಹಾಗೂ ಫೋನ್ ನಂಬರನ್ನು ಹಾಕಬೇಕು ಇದರಿಂದ ತಮ್ಮ ಸಮಸ್ಯೆ ಬಗೆಹರಿಸಲು ಅನುಕೂಲವಾಗುತ್ತದೆ ಎಂದು ಶಾಸಕರು ತಿಳಿಸಿದರು . ನಂಜನಗೂಡು ನಗರವಾಸಿಗಳು ಇದರ ಅನುಕೂಲವನ್ನು ಪಡೆದುಕೊಂಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮುಂದಾಗಬೇಕಿದೆ ಎಂದು ಶಾಸಕ ದರ್ಶನ್ ಧ್ರುವ ನಾರಾಯಣ್ ಹರ್ಷ ವ್ಯಕ್ತಪಡಿಸುವುದರ ಜೊತೆಗೆ ಕ್ಯೂ ಆರ್ ಕೋಡ್ ಸೌಲಭ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಪೌರಾಯುಕ್ತ ಎಂ.ಬಸವರಾಜು, ಎಇಇ ಮಹೇಶ್ ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ನಗರಸಭಾ ಮಾಜಿ ಅಧ್ಯಕ್ಷ ಶ್ರೀಕಂಠ ಸ್ವಾಮಿ ಸೇರಿದಂತೆ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಹಾಜರಿದ್ದರು.

