ನಂಜನಗೂಡು: ಮೈಸೂರು ಜಿಲ್ಲೆಯಲ್ಲಿ ನಂಜನಗೂಡು ತಾಲ್ಲೂಕು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಲಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ನಂಜನಗೂಡು ನಗರದ  ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ಹಾಗೂ ರಾಷ್ಟ್ರೀಯ  ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು , ನಂಜನಗೂಡು ಶೈಕ್ಷಣಿಕವಾಗಿ ಧಾರ್ಮಿಕವಾಗಿ ಬಹಳ ಮುಂದೆ ಸಾಗುತ್ತಿದೆ.  ತಾಲ್ಲೂಕಿಗೆ ದೇಶದ ಪ್ರತಿಷ್ಠಿತ ಸರ್ಕಾರಿ ಶಾಲಾ ಕಾಲೇಜುಗಳು ಬರಲಿದೆ. ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಲಿದೆ.

ಪಿಯು ಕಾಲೇಜಿಗೆ ಸರ್ಕಾರದಿಂದ 1 ಕೋಟಿಗೂ ಅಧಿಕ ಹಣವನ್ನು  ಅಭಿವೃದ್ಧಿ ಪಡಿಸಲು ನೀಡಿದ್ದೇವೆ. ನಮ್ಮ ತಂದೆ ಧ್ರುವನಾರಾಯಣ್ ರವರ ಎಜುಕೇಷನ್ ಟ್ರಸ್ಟ್ ವತಿಯಿಂದ ಸಿಇಟಿ ಮತ್ತು ನೀಟ್ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿಗಳನ್ನು ನೀಡಲಾಗಿತ್ತು.

ಈ ತರಬೇತಿ ಪಡೆದ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಮುಂದಿನ ವಿದ್ಯಾಭ್ಯಾಸಕ್ಕೆ ಮುಂದಾಗಿದ್ದಾರೆ. ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ಮಾದರಿಯಲ್ಲಿ ವಿಶೇಷ ತರಗತಿಗಳನ್ನು ನಡೆಸಲು‌ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುವುದು ಎಂದರು.

ಆಧ್ಯಾತ್ಮಿಕ ಚಿಂತಕ ಶಂಕರ್ ದೇವನೂರು‌ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿಯುತ್ತಿದ್ದಾರೆ‌. ಅವರ ಆಸಕ್ತಿ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ತಲ್ಲಿನ ರಾಗಿದ್ದಾರೆ. ಅವರನ್ನು ಪಠ್ಯ ಪುಸ್ತಕಗಳ ಕಡೆ ಕರೆ ತರುವುದು ನಮ್ಮ ಕರ್ತವ್ಯವಾಗಿದೆ. ಮೊಬೈಲ್ ಬಳಕೆ ಮಾಡುತ್ತಿರುವುದು ಯುವ ಜನಾಂಗದಲ್ಲಿ ಅತಿಯಾಗಿ ಕಂಡುಬರುತ್ತಿದೆ ಇದು ಆತಂಕಕಾರಿಯಾಗಿದೆ. ವಿದ್ಯಾರ್ಥಿಗಳು ಮೊಬೈಲ್ ವ್ಯಾಮೋಹವನ್ನು ಬಿಟ್ಟು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ  ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹನುಮಂತರಾವ್, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಆಧ್ಯಾತ್ಮಿಕ ಚಿಂತಕ ಶಂಕರ್ ದೇವನೂರು, ಅನುಸೂಯ ಶಂಕರ್ ದೇವನೂರು, ಕವಯತ್ರಿ ಭವಾನಿ ಲೋಕೇಶ್, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕುರಹಟ್ಟಿ ಮಹೇಶ್, ಪ್ರಾಂಶುಪಾಲರಾದ ಚಂದ್ರಶೇಖರ್ ಬಾಬು, ಕ್ರೀಡಾ ಚಟುವಟಿಕೆಗಳ ಕಾರ್ಯದರ್ಶಿ ನಟರಾಜು, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಅಧಿಕಾರಿ ರಾಘವೇಂದ್ರ, ಉಪನ್ಯಾಸಕರಾದ ಮಹದೇವಯ್ಯ , ಶಿವಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.