ನಂಜನಗೂಡು: ಸರ್ಕಾರಿ ಶಾಲೆಯ ಮಕ್ಕಳು ಪೌರಾಣಿಕ ನಾಟಕ ಪ್ರದರ್ಶನ ಮಾಡಿ ಓದಿನಲ್ಲೂ, ಕಲೆಯಲ್ಲೂ ನಾವು ಮುಂದು ಎಂಬುದನ್ನು ಸಾಬೀತು ಮಾಡಿದ್ದಾರೆ.

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಚಿನ್ನಂಬಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ವರನಟ ಡಾ.ರಾಜಕುಮಾರ್ ಮತ್ತು ನಟ ಪುನೀತ್ ರಾಜಕುಮಾರ್ ನಟಿಸಿರುವ ಭಕ್ತ ಪ್ರಹ್ಲಾದ ಎಂಬ ಪೌರಾಣಿಕ ನಾಟಕ ಪ್ರದರ್ಶನ ಮಾಡಿ, ಪ್ರೇಕ್ಷಕರ ಮನಗೆದ್ದರು.

ಭಕ್ತ ಪ್ರಹ್ಲಾದ ನಾಟಕಕ್ಕೆ ನಂಜನಗೂಡು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಹೇಶ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸರ್ಕಾರಿ ಶಾಲಾ ಅವರಣದಲ್ಲಿ ಮಕ್ಕಳಿಂದ ಪೌರಾಣಿಕ ನಾಟಕ ಮಾಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಕಲೆ, ನಾಟ್ಯ, ಸಂಸ್ಕೃತಿ, ಸಾಹಿತ್ಯ, ಜಾನಪದ ಸಾಹಿತ್ಯ, ನಾಟಕ ಸಾಹಿತ್ಯ, ಎಲ್ಲವೂ ಕೂಡ ಈ ತಂತ್ರಜ್ಞಾನದ ಯುಗದಲ್ಲಿ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಚಿನ್ನಂಬಳ್ಳಿ ಸರ್ಕಾರಿ ಶಾಲೆಯಲ್ಲಿ ಭಕ್ತ ಪ್ರಹ್ಲಾದ ಎಂಬ ಪೌರಾಣಿಕ ನಾಟಕವನ್ನು ಪ್ರದರ್ಶನ ಮಾಡುತ್ತಿರುವುದು ಸಂತಸ ತಂದಿದೆ.

ಸರ್ಕಾರಿ ಶಾಲೆಗಳ ಬಗ್ಗೆ ಆಸಕ್ತಿ ಹೊಂದಿ, ಸರ್ಕಾರಿ ಶಾಲೆಗಳ ಬಲವರ್ಧನೆ ಆಗಬೇಕು. ಸರ್ಕಾರಿ ಶಾಲೆಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಮಕ್ಕಳಿಗೆ ಗುಣಮಟ್ಟದ ಉತ್ತಮವಾದ ಶಿಕ್ಷಣವನ್ನು ನೀಡುತ್ತದೆ. ಶಿಕ್ಷಣ ಎಂದರೆ ಬರೀ ಪಾಠ ಬೋಧನೆ ಅಲ್ಲ. ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಕೂಡ ನಮ್ಮ ಸರ್ಕಾರಿ ಶಾಲೆಗಳು ಮೇಲುಗೈ ಸಾಧಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳನ್ನು ಹಾಗೂ ಜಾನಪದ ಕಲೆಗಳನ್ನು ಹೊರ ತೆಗೆಯುವ ಕೆಲಸವನ್ನು ಸರ್ಕಾರಿ ಶಾಲೆಗಳು ಮಾಡುತ್ತಿವೆ. ಗ್ರಾಮೀಣ ಪ್ರತಿಭೆಗಳನ್ನು ಗ್ರಾಮಸ್ಥರು ಮತ್ತು ಶಿಕ್ಷಕರು ಅನಾವರಣ ಮಾಡುತ್ತಿರುವುದು ಮಾದರಿಯಾಗಿದೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಯಾವುದೇ ರಂಗದಲ್ಲೂ ಕಡಿಮೆ ಇಲ್ಲ. ದಯವಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಮನವಿ ಮಾಡಿದರು.

ಭಕ್ತ ಪ್ರಹ್ಲಾದ ನಾಟಕದಲ್ಲಿ ವಾದ್ಯಗೋಷ್ಠಿ ಮತ್ತು ಕೀಬೋರ್ಡ್ ವಾದಕ ಕೆರೆಹಳ್ಳಿ ಮಂಜುನಾಥ್, ನಾಟಕದ ನಿರ್ದೇಶಕ ಮತ್ತು ಸಂಯೋಜಕ ದರ್ಶನ್ ಮಂಜುನಾಥ್, ಖ್ಯಾತ ತಬಲವಾದಕ ಬದನವಾಳು ಲಕ್ಷ್ಮೀ ನಾರಾಯಣ ಪುಟಾಣಿ ಕಲಾವಿದರಿಗೆ ಸಾಥ್ ನೀಡಿದ್ದಾರೆ. ಶಾಲಾ ಆವರಣವನ್ನು ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಲಾಗಿತ್ತು. ಇದಕ್ಕೂ ಮುನ್ನ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರು, ಶಾಲೆಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು.