ಮೈಸೂರು: ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ ಕರ್ತವ್ಯ ನಿರ್ವಹಿಸಲು ದೇಶದ ಮೊದಲ ಭಾರತೀಯ ಸೇನಾ ಅಧಿಕಾರಿಯಾಗಿ (ಆರ್ಮಿ ಏರ್ಡಿಫೆನ್ಸ್) ಮೈಸೂರಿನ ಸುಪ್ರಿತಾ ಸಿ.ಟಿ. ಆಯ್ಕೆಯಾಗಿದ್ದಾರೆ.
ಮೂಲತಃ ಚಾಮರಾಜನಗರದ ಸುಪ್ರಿತಾ ಮೈಸೂರಿನ ಸರ್ದಾರ್ ವಲ್ಲಭಬಾಯಿ ನಗರದ ನಿವಾಸಿ. ಇವರ ತಂದೆ ತಿರುಮಲ್ಲೇಶ್ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ತಲಕಾಡು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ನಿರ್ಮಲ ಗೃಹಿಣಿಯಾಗಿದ್ದು, ಮೈಸೂರಿನಿಂದ ಸಿಯಾಚಿನ್ನ ಭೂಪ್ರದೇಶದವರೆಗಿನ ಪ್ರಯಾಣವು ಸುಪ್ರೀತಾ ಅವರ ಅಚಲ ನಿರ್ಧಾರ ಮತ್ತು ಪ್ರಬಲ ಮನೋಸ್ಥೈರ್ಯಕ್ಕೆ ಸಾಕ್ಷಿಯಾಗಿದೆ.
2021 ರಲ್ಲಿ, ಸುಪ್ರೀತಾ ಅವರು ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದರು. ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA) ಯಲ್ಲಿನ ಕಠಿಣ ತರಬೇತಿಯು ಆರ್ಮಿ ಏರ್ ಡಿಫೆನ್ಸ್ ಯೂನಿಟ್ನಲ್ಲಿ ಕರ್ತವ್ಯ ನಿರ್ವಹಿಸಲು ಅವರನ್ನು ಸಿದ್ಧಪಡಿಸಿದೆ.

