ನಂಜನಗೂಡು: ಆಸ್ಪತ್ರೆಗೆ ಹೋದ ತಾಯಿ ತನ್ನ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ಸರಗೂರು ತಾಲ್ಲೂಕಿನ ಕಟ್ಟೆ ಹುಣಸೂರು ಗ್ರಾಮದಲ್ಲಿ ನಡೆದಿದೆ. ಜಯಶೀಲ (27) ತನ್ನ ಐದು ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿರುವ ತಾಯಿಯಾಗಿದ್ದಾಳೆ.

ಕಟ್ಟೆ ಹುಣಸೂರು ಗ್ರಾಮದಿಂದ ನಂಜನಗೂಡಿನ ಹುರ ಗ್ರಾಮದಲ್ಲಿರುವ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಪತಿಗೆ ಹೇಳಿ ಹೋದ ಜಯಶೀಲ ಮತ್ತೆ ವಾಪಸ್ ಬಂದಿಲ್ಲ. ಈ ಬಗ್ಗೆ ನೆಂಟರಿಷ್ಟರು ಹಾಗೂ ಸ್ನೇಹಿತರ ಮನೆಯಲ್ಲೂ ಹುಡುಕಿದರೂ ಇವರ ಸುಳಿವು ಸಿಕ್ಕಿಲ್ಲ ಎಂದು ಪತಿ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಚಹರೆ ಹೀಗಿದ್ದು, ಜಯಶೀಲ 27 ವರ್ಷ ವಯಸ್ಸು, 5 ಅಡಿ ಎತ್ತರ, ಕೋಲು ಮುಖ, ಕನ್ನಡ ಭಾಷೆ ಮಾತನಾಡುತ್ತಾರೆ. ಹೋಗುವಾಗ ಕಪ್ಪು ಬಣ್ಣದ ಚೂಡಿದಾರ್ ಧರಿಸಿದ್ದಾರೆ. ಐದು ವರ್ಷದ ಹೆಣ್ಣು ಮಗುವಿದೆ. ಇವರನ್ನು ಹುಡುಕಿ ಕೊಡಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇವರ ಸುಳಿವು ಸಿಕ್ಕಲ್ಲಿ ಹುಲ್ಲಹಳ್ಳಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 9480805066 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಪೊಲೀಸರು ತಿಳಿಸಿದ್ದಾರೆ.