ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನ ಜನತೆಗೆ ಕುಡಿಯುವ ನೀರಿಗೆ ಸಂಕಷ್ಟ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಹಿನ್ನಲೆ ಕುಡಿಯುವ ನೀರಿಗೆ ಬರ ಎದುರಾಗುವ ಬೀತಿ ಎದುರಾಗಿದ್ದು ಈ ವೇಳೆಗೆ ಮೈದುಂಬಿ ಹರಿಯಬೇಕಿದ್ದ ಕಪಿಲೆ ಬರಡಾಗಿದ್ದಾಳೆ.
ಇದರಿಂದಾಗಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ದೇಬೂರು ಪಂಪ್ ಹೌಸ್ ಬಳಿ ಕಪಿಲಾ ನದಿ ನೀರು ತಳಮಟ್ಟಕ್ಕೆ ಕುಸಿದಿದೆ. ನದಿಯಲ್ಲಿನ ನೀರು ತಳಮಟ್ಟ ಸೇರಿರುವ ಹಿನ್ನೆಲೆ ಕುಡಿಯುವ ನೀರು ಪೂರೈಸಲಾಗದ ನಂಜನಗೂಡಿನ ನಗರಸಭಾ ಅಧಿಕಾರಿಗಳು ಕುಡಿಯುವ ನೀರು ಸರಬರಾಜು ಸ್ಥಗಿತವಾಗಲಿರುವುದಾಗಿ ಫೋಟೋಗಳ ಸಮೇತ ವಾಟ್ಸಾಪ್ ಸಂದೇಶ ರವಾನಿಸಿದ್ದಾರೆ.
ಈಗಾಗಲೇ ಕಳ್ಳತನಗಳಂತ ಅಪರಾಧ ಕೃತ್ಯಗಳಿಂದ ಬೇಸತ್ತ ಜನತೆಗೆ ಈಗ ಕುಡಿಯುವ ನೀರಿನ ಅಭಾವ ಕೂಡ ಶಾಕ್ ನೀಡಿದೆ. ನಂಜನಗೂಡು ನಿವಾಸಿಗಳ ನೀರಿನ ಕೊರತೆ ನಿವಾರಿಸಲು ವರುಣನ ಕೃಪೆ ಅವಶ್ಯಕವಾಗಿದೆ. ಮುಂಗಾರು ಮಳೆ ಇದೇ ರೀತಿ ಕಣ್ಣಾ ಮುಚ್ಚಾಲೆ ಹಾಡಿ ಕೈಕೊಟ್ಟು ಕಬಿನಿ ಜಲಾಶಯ ತುಂಬದಿದ್ದಲ್ಲಿ ನಂಜನಗೂಡಿನ ಎಲ್ಲಾ 31 ವಾರ್ಡಿನ ಜನತೆ ತೊಂದರೆಗೆ ಗುರಿಯಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ.
-ಸಿ.ಎಂ ಸುಗಂಧರಾಜು ನ್ಯೂಸ್ ಕರ್ನಾಟಕ ಮೈಸೂರು

