ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನಲ್ಲಿ ಮುಸುಕುಧಾರಿಗಳು ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಯತ್ನಿಸಿದ ಪ್ರಕರಣ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಈ ಬಗ್ಗೆ ನ್ಯೂಸ್ ಕರ್ನಾಟಕ ಸುದ್ದಿ ವಾಹಿನಿಯಲ್ಲಿ ವರದಿ ಪ್ರಸಾರ ಮಾಡಲಾಗಿತ್ತು.
ಇದರಿಂದ ಎಚ್ಚೆತ್ತುಕೊಂಡ ಶಾಸಕ ದರ್ಶನ್ ಧ್ರುವನಾರಾಯಣ್, ಪೊಲೀಸ್ ಅಧಿಕಾರಿಗಳೊಂದಿಗೆ ನಂಜನಗೂಡಿನ ತಾಲ್ಲೂಕು ಆಡಳಿತ ಭವನದಲ್ಲಿ ತುರ್ತು ಸಭೆ ನಡೆಸಿ, ಸಾರ್ವಜನಿಕರಲ್ಲಿ ಮೂಡಿರುವ ಆತಂಕ ನಿವಾರಣೆಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಇದು ನ್ಯೂಸ್ ಕರ್ನಾಟಕ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ. ಮೂರು ದಿನಗಳ ಹಿಂದೆ ಇಬ್ಬರು ಖದೀಮರು ಮುಸುಕು ಧರಿಸಿ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ರಾಜಾರೋಷವಾಗಿ ಓಡಾಡಿ ದರೋಡೆಗೆ ಯತ್ನಿಸಿದ್ದರು. ಒಂದು ಮನೆಗೆ ನುಗ್ಗಿ ಬರಿಗೈಲಿ ಹಿಂದಿರುಗಿದ್ದರು. ಈ ದೃಶ್ಯಗಳು ಸಿಸಿ ಕ್ಯಾಮರಾಲ್ಲಿ ಸೆರೆಯಾಗಿತ್ತು. ಸುದ್ದಿಯನ್ನು ಪ್ರಸಾರ ಮಾಡಿ ನಂಜನಗೂಡು ಪೊಲೀಸರ ನಿರ್ಲಕ್ಷ್ಯ ಕಾರ್ಯವೈಖರಿಯನ್ನು ಪ್ರಶ್ನಿಸಲಾಗಿತ್ತು.

ಶಾಸಕ ದರ್ಶನ್ ಧ್ರುವನಾರಾಯಣ್ ಗಮನ ಹರಿಸಿ ಪೊಲೀಸ್ ಇಲಾಖೆಗೆ ಸರ್ಜರಿ ಮಾಡಬೇಕಾಗಿದೆ ಎಂದು ಸುದ್ದಿ ವಾಹಿನಿಯು ಸಲಹೆ ನೀಡಿತ್ತು. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಸ್ಥಳೀಯ ಶಾಸಕ ದರ್ಶನ್ ಧ್ರುವನಾರಾಯಣ್ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ. ನಂಜನಗೂಡು ಡಿವೈಎಸ್ಪಿ ರಘು, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಸೇರಿದಂತೆ ತಾಲ್ಲೂಕಿನ ಪೊಲೀಸ್ ಠಾಣೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಪ್ರಮುಖವಾಗಿ ದರೋಡೆಗೆ ಸಂಚು ರೂಪಿಸಿ ಆತಂಕ ಸೃಷ್ಟಿಸಿರುವ ಖದೀಮರ ಬಗ್ಗೆ ಚರ್ಚಿಸಿದ್ದಾರೆ. ನಿನ್ನೆ ತಡರಾತ್ರಿ ವರೆಗೂ ಸಭೆ ನಡೆಸಿದ ಶಾಸಕರು, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ರಾತ್ರಿಪಾಳಿಯಲ್ಲಿ ಗಸ್ತು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ವಿಚಾರದಲ್ಲಿ ಸಾರ್ವಜನಿಕರು ಆತಂಕ ಪಡುವುದು ಬೇಡ. ತಾಲ್ಲೂಕು ಆಡಳಿತ ಸುಭದ್ರವಾಗಿದೆ. ಸಾರ್ವಜನಿಕರಿಗೆ ವಿಶ್ವಾಸ ಮೂಡುವ ದಿಕ್ಕಿನಲ್ಲಿ ಭದ್ರತೆ ಒದಗಿಸಲಾಗುತ್ತದೆ ಎಂದು ಅಭಯ ನೀಡಿದ್ದಾರೆ.
ಗ್ರಾಮಾಂತರ ಠಾಣೆಗಳು ಹಾಗೂ ಹುಲ್ಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕ್ರೈಂ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಶಾಸಕರು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಪೊಲೀಸರಿಗೆ ತಾಕೀತು ಮಾಡಿದ್ದಾರೆ. ಇದು ನ್ಯೂಸ್ ಕರ್ನಾಟಕ ವರದಿಯ ಫಲಶೃತಿಯಾಗಿದೆ.

