ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನಲ್ಲಿ ದೊಡ್ಡಜಾತ್ರೆ ಸಂಭ್ರಮಕ್ಕೆ ತೆರೆಬಿದ್ದಿದೆ. ನಾಡಿನ ವಿವಿಧ ಭಾಗಗಳಿಂದ ಆಗಮಿಸಿ ಶ್ರೀಕಂಠೇಶ್ವರನ ದರುಶನ ಪಡೆದ ಲಕ್ಷಾಂತರ ಭಕ್ತರು ಪುನೀತರಾದರು.

ದೊಡ್ಡಜಾತ್ರೆಗೆ ತೆರೆಬೀಳುತ್ತಿದ್ದಂತೆಯೇ ಪೌರಕಾರ್ಮಿಕರಿಗೆ ಸ್ವಚ್ಛತೆ ಒಂದು ಸವಾಲು. ಲಕ್ಷಾಂತರ ಭಕ್ತರು ಬಿಸಾಡಿದ ಕಸದ ರಾಶಿಯನ್ನ ತೆರುವುಗೊಳಿಸಿ ಸ್ವಚ್ಛಗೊಳಿಸುವುದು ಪೌರಕಾರ್ಮಿಕರ ಜವಾಬ್ದಾರಿ. ದೇವಾಲಯದ ಸಮೀಪ ಎಲ್ಲೆಂದರಲ್ಲಿ ಮನಸೋ ಇಚ್ಛೆ ಬಿಸಾಡಿದ ಕಸದ ರಾಶಿ ತೆರುವುಗೊಳಿಸುತ್ತಿದ್ದ ಪೌರಕಾರ್ಮಿಕರಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಸಾಥ್ ನೀಡಿ ಸ್ವಚ್ಛತೆಗೆ ಮುಂದಾದರು.

ಕೈಗಳಿಗೆ ಗ್ಲೌಸ್ ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತೆಗೆ ಮುಂದಾದರು. ದರ್ಶನ್ ದೃವನಾರಾಯಣ್ ಗೆ ಕಾರ್ಯಕರ್ತರು ಜೊತೆಯಾದರು. ಶ್ರಮಜೀವಿಗಳಾದ ಪೌರಕಾರ್ಮಿಕರ ಜೊತೆ ಶ್ರಮದಾನ ಮಾಡಿದ ಶಾಸಕರಿಗೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾದರು.