ನಂಜನಗೂಡು: ಏ. 26 ಮತ್ತು ಏ.27 ರಂದು ನಂಜನಗೂಡಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆ ಎಂಎಲ್ಎ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ -2025 ನಡೆಸಲಾಗುತ್ತಿದೆ ಎಂದು ಪಂದ್ಯಾವಳಿಯ ವ್ಯವಸ್ಥಾಪಕ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕ ಎಂ.ಡಿ ಬಾಲರಾಜು ಹೇಳಿದರು.
ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರ ಹುಟ್ಟು ಹಬ್ಬದ ಅಂಗವಾಗಿ ಇದೇ ಮೊಟ್ಟ ಮೊದಲ ಬಾರಿಗೆ ನಂಜನಗೂಡಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಏ.26 ಮತ್ತು 27 ರಂದು ಎಂಎಲ್ಎ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ.
ಏ.26 ರಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ಕ್ರಿಕೆಟ್ ಪಂದ್ಯಾವಳಿಯನ್ನು ಹೆಚ್.ಡಿ ಕೋಟೆ ಶಾಸಕರಾದ ಅನಿಲ್ ಚಿಕ್ಕಮಾದು ರವರು ಉದ್ಘಾಟನೆ ಮಾಡಲಿದ್ದಾರೆ. ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ.
ಗುಂಡ್ಲುಪೇಟೆ ಶಾಸಕರಾದ ಗಣೇಶ್ ಪ್ರಸಾದ್ ಘನ ಉಪಸ್ಥಿತಿಯಲ್ಲಿದ್ದಾರೆ. ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮಾರುತಿ ರವರು ಉಪಸ್ಥಿತಿಯಲ್ಲಿರುತ್ತಾರೆ. ಏ.27 ರಂದು ಸಮಾರೋಪ ಸಮಾರಂಭವನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಸುನೀಲ್ ಬೋಸ್ ಉದ್ಘಾಟನೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ದರ್ಶನ್ ಧ್ರುವನಾರಾಯಣ್ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯರವರು ಘನ ಉಪಸ್ಥಿತಿಯಲ್ಲಿದ್ದಾರೆ. ಉಪಸ್ಥಿತಿಯಲ್ಲಿ ನಗರಸಭಾ ಉಪಾಧ್ಯಕ್ಷರಾದ ರಿಯಾನ ಬಾನು, ಪ್ರಥಮ ದರ್ಜೆ ಗುತ್ತಿಗೆದಾರರಾದ ಯು.ಎನ್ ಪದ್ಮನಾಭರಾವ್ ಸೇರಿದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳ ಜೊತೆ ಕ್ರೀಡೆಯನ್ನು ನಡೆಸಲಾಗುತ್ತದೆ.
ಅವರ ಜೊತೆಗೆ ಪತ್ರಕರ್ತರು ಮತ್ತು ವಕೀಲರನ್ನು ಭಾಗವಹಿಸುವಂತೆ ಶಾಸಕರು ತಿಳಿಸಿದ್ದಾರೆ. ಈಗಾಗಲೇ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸುಮಾರು 10 ತಂಡಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಪ್ರಥಮ ಬಹುಮಾನವಾಗಿ 50 ಸಾವಿರ ನಗದು, ಆಕರ್ಷಕ ಟ್ರೋಪಿ, ಮೆಡಲ್ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ.
ದ್ವಿತೀಯ ಬಹುಮಾನವಾಗಿ 25 ಸಾವಿರ ನಗದು, ಆಕರ್ಷಕ ಟ್ರೋಪಿ, ಮೆಡಲ್ ಮತ್ತು ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರು ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಲು ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಇದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಸ್ನೇಹ ಬಾಂಧವ್ಯ ಮತ್ತು ಸಹೋದರತೆ ಬೆಸೆಯುವ ಒಂದು ವಿನೂತನವಾದ ಕಾರ್ಯಕ್ರಮವಾಗಿದೆ ಕ್ರಿಕೆಟ್ ಪಂದ್ಯಾವಳಿಗೆ ಕ್ರೀಡಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದಿಗೋಷ್ಠಿಯಲ್ಲಿ ಎಂ.ಡಿ ಬಾಲರಾಜು, ಕವಲಂದೆ ರಾಹುಲ್, ಮಾಜಿ ಗ್ರಾಪಂ ಸದಸ್ಯ ಮುಳ್ಳೂರು ಮಹದೇವಸ್ವಾಮಿ, ಹೆಡತಲೆ ರಾಜು, ಮುಳ್ಳೂರು ಸುರೇಶ್ ಹಾಜರಿದ್ದರು.

