ನಂಜನಗೂಡು: ಮನೆ ಮುಂದೆ ನಿಲ್ಲಿಸಿದ್ದ ಸುಮಾರು ಎರಡು ಲಕ್ಷ ರೂ. ಮೌಲ್ಯದ ಬುಲೆಟ್ ಬೈಕ್ ಅನ್ನು ಕಳ್ಳತನ ಮಾಡಿ, ಬಳಿಕ ಅದನ್ನು ನಾಲೆಗೆ ಎಸೆದಿರುವ ವಿಚಿತ್ರ ಘಟನೆ ನಂಜನಗೂಡು ತಾಲ್ಲೂಕಿನ ಹರತಲೆ ಗ್ರಾಮದಲ್ಲಿ ನಡೆದಿದೆ.

ಹರತಲೆ ಗ್ರಾಮದ ಕುಮಾರ್ ಎಂಬುವರಿಗೆ ಸೇರಿದ ಬುಲೆಟ್ ಬೈಕ್ ಅನ್ನು ಎಂದಿನಂತೆ ಮನೆಯ ಮುಂಭಾಗದಲ್ಲಿ ನಿಲ್ಲಿಸಲಾಗಿತ್ತು. ಆದರೆ ಮಧ್ಯರಾತ್ರಿ ವೇಳೆ ಖದೀಮರು ಬೈಕ್ ಅನ್ನು ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಬೆಳಿಗ್ಗೆ ಎದ್ದು ನೋಡಿದಾಗ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಾಣೆಯಾಗಿರುವುದು ಕುಮಾರ್ ಅವರ ಗಮನಕ್ಕೆ ಬಂದಿದೆ. ಕೂಡಲೇ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ, ಇಬ್ಬರು ಯುವಕರು ಬೈಕ್ ಅನ್ನು ಕೊಂಡೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ ಎಂದು ತಿಳಿದುಬಂದಿದೆ.

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹರತಲೆ ಗ್ರಾಮದ ಚರಣ್ ಹಾಗೂ ಮಂಜುನಾಥ್ ಎಂಬುವರು ಬೈಕ್ ಕಳ್ಳತನದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ನಂತರ ಕಳ್ಳತನವಾಗಿದ್ದ ಬುಲೆಟ್ ಬೈಕ್ ಹರತಲೆ ಗ್ರಾಮದ ಕಬಿನಿ ಬಲದಂಡೆ ನಾಲೆಯಲ್ಲಿ ಪತ್ತೆಯಾಗಿದೆ. ಬೈಕ್ ಅನ್ನು ಕದ್ದು ನಾಲೆಗೆ ಎಸೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಘಟನೆ ಸಂಬಂಧ ಕುಮಾರ್ ಅವರು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.