ನಂಜನಗೂಡು: ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿಯನ್ನು ಮನೆಗೆ ಕರೆತಂದ ಸ್ವಂತ ಚಿಕ್ಕಪ್ಪ ಅತ್ಯಾಚಾರವೆಸಗಿದ ಘಟನೆ ನಂಜನಗೂಡು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. 10 ನೇ ತರಗತಿ ಓದುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಕಾಮುಕ ಚಿಕ್ಕಪ್ಪನನ್ನ ಪೊಲೀಸರು ಕಂಬಿ ಎಣಿಸಲು ಕಳಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ಪೀರಿಯೆಡ್ಸ್ ಆಗಿಲ್ಲವೆಂಬ ಕಾರಣಕ್ಕೆ ಬಾಲಕಿಯನ್ನ ವೈದ್ಯರು ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ನಂಜುಂಡಸ್ವಾಮಿ ಅತ್ಯಾಚಾರವೆಸಗಿದ ಕಾಮುಕ. ಬಾಲಕಿಯರ ಪ್ರೌಡಶಾಲೆಯೊಂದರಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು ಜನವರಿಯಲ್ಲಿ ಪುಸಲಾಯಿಸಿ ಮನೆಗೆ ಕರೆತಂದಿದ್ದಾನೆ. ನಂತರ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿ ಯಾರಿಗೂ ತಿಳಿಸಬಾರದೆಂದು ತಿಳಿಸಿ ಅಮಾಯಕನಂತೆ ಮತ್ತೆ ಶಾಲೆಗೆ ಬಿಟ್ಟಿದ್ದಾನೆ.

ಪೀರಿಯೆಡ್ಸ್ ನಲ್ಲಿ ವತ್ಯಾಸ ಕಂಡು ಬಂದು ಹೊಟ್ಟೆ ನೋವಿದೆ ಎಂದು ವೈದ್ಯರ ಬಳಿ ತೆರಳಿದಾಗ ಬಾಲಕಿ 6 ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಬಾಲಕಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ನಂಜುಂಡಸ್ವಾಮಿ ವಿರುದ್ದ ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಎಸ್.ಎಸ್.ಎಲ್.ಸಿ.ಪರೀಕ್ಷೆಗಳು ನಡೆಯುತ್ತಿರುವುದರಿಂದ ನೊಂದ ಬಾಲಕಿಯನ್ನು ಬಾಲಮಂದಿರದಿಂದ ಪರೀಕ್ಷಾ ಕೇಂದ್ರಕ್ಕೆ ಪೊಲೀಸರ ಭದ್ರತೆಯೊಂದಿಗೆ ಕರೆತರಲಾಗುತ್ತಿದೆ ಎಂದು ಹೇಳಲಾಗಿದೆ. ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.