ಮೈಸೂರು: ಮಂಗಳಮುಖಿಯರು ನೀಡಿದ ಕಿರುಕುಳಕ್ಕೆ ಹೆದರಿ ಅಪ್ರಾಪ್ತ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.
ಹುಣಸೂರಿನ ಕಿರಜಾಜಿ ಸರ್ಕಲ್ ಬಳಿ ಎಳೆನೀರು ವ್ಯಾಪಾರ ಮಾಡುತ್ತಿದ್ದ ರಾಹುಲ್ ಮೌರ್ಯ(17) ಆತ್ಮಹತ್ಯೆ ಮಾಡಿಕೊಂಡವನು. ಎಳನೀರು ವ್ಯಾಪಾರ ಮಾಡುತ್ತಿದ್ದ ಈತನ ಬಳಿಗೆ ಬರುತ್ತಿದ್ದ ಮಂಗಳಮುಖಿಯರೊಂದಿಗೆ ಈತನಿಗೆ ಪರಿಚಯವಾಗಿತ್ತು. ಅವರೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದನು ಎಂದು ಹೇಳಲಾಗಿದೆ. ಸ್ನೇಹ ಬೆಳೆಸಿಕೊಂಡಿದ್ದ ಆತ ಮಂಗಳಮುಖಿಯರೊಂದಿಗೆ ಸಲುಗೆಯಿಂದ ಇದ್ದನು.
ಈ ನಡುವೆ ನಾಲ್ಕು ತಿಂಗಳ ಹಿಂದೆ ಈತ ನಾಪತ್ತೆಯಾಗಿದ್ದಾನೆ. ಆದರೆ ತನ್ನ ತಾಯಿ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ರಾಹುಲ್ ಮೌರ್ಯ ತಾನು ಇರುವ ಸ್ಥಳ ತಿಳಿಸಿಲ್ಲ. ಈ ಮಧ್ಯೆ ಜೂನ್ 21 ರಂದು ಆತ ಹೆಜ್ಜೂರು ಗ್ರಾಮದ ತನ್ನ ದೊಡ್ಡಮ್ಮನ ಮನೆಗೆ ಹಿಂದಿರುಗಿದ್ದಾನೆ. ಇದೆಲ್ಲದರ ನಡುವೆ ಜೂನ್ 23 ರಂದು ಕೆಲವು ಮಂಗಳಮುಖಿಯರು ಕಿರಜಾಜಿ ಸರ್ಕಲ್ ಬಳಿಯಿರುವ ರಾಹುಲ್ ಮೌರ್ಯ ಮನೆಗೆ ತೆರಳಿ ಕುಟುಂಬಸ್ಥರ ಜೊತೆ ಜಗಳವಾಡಿ ಕೂಗಾಡಿದ್ದಾರೆ.
ಅಷ್ಟೇ ಅಲ್ಲದೆ ಆತ ನಮ್ಮ ಹುಡುಗಿಯೊಬ್ಬಳನ್ನು ಕರೆದೊಯ್ದಿದ್ದಾನೆಂದು ಆರೋಪಿಸಿದ್ದರು. ಆದರೆ ಅದೇ ದಿನ ಸಂಜೆ 5 ಗಂಟೆಗೆ ಹೆಜ್ಜೂರು ಗ್ರಾಮದ ಜಮೀನಿನಲ್ಲಿರುವ ಬಿದಿರುಶೆಡ್ ನಲ್ಲಿ ರಾಹುಲ್ ಮೌರ್ಯ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಂಗಳಮುಖಿಯರ ಕಿರುಕುಳದಿಂದ ಮನನೊಂದು ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಂದೆ ಕುಮಾರ್ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸೂಕ್ತ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

