ನಂಜನಗೂಡು : ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಮೇಲಿನ ಅಮಾನತು ವಿಚಾರ ಮಾತನಾಡಲು ಮೈಸೂರಿನ  ಕೇಂದ್ರ ಕಛೇರಿಗೆ ಬರುತ್ತಿದ್ದ ವ್ಯಕ್ತಿ ಮೇಲೆ 8 ಮಂದಿ ಗುಂಪು ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ನಂಜನಗೂಡು ತಾಲ್ಲೂಕು ತರಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸಂಘದ ನಿರ್ದೇಶಕಿಯ ಪತಿ ಬಸವರಾಜು ಹಾಗೂ ಮಗ ಸದಾಶಿವ ಹಲ್ಲೆಗೆ ಒಳಗಾದವರು. ತರಗನಹಳ್ಳಿ ನಿವಾಸಿಗಳಾದ ಹರೀಶ್, ಶಿವಕುಮಾರ್, ಚಾಮರಾಜು, ರಾಜಣ್ಣ, ರಾಜಶೇಖರ, ಸಂಜು, ಮಧುಕುಮಾರ್, ಮಹದೇವಪ್ರಸಾದ್ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತರಗನಹಳ್ಳಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಮಹೇಶ್ ರವರ ಮೇಲೆ ಸುಳ್ಳು ಆರೋಪ ಹೊರೆಸಿ ಕೆಲಸದಿಂದ ಅಮಾನತು ಮಾಡಲಾಗಿತ್ತು. ಈ ಸಂಬಂಧ ಪರಿಶೀಲನೆ ನಡೆಸಿದ ಕೇಂದ್ರ ಕಛೇರಿಯ ಅಧಿಕಾರಿಗಳು ಸುಳ್ಳು ಆರೋಪವೆಂದು ಪರಿಗಣಿಸಿ ಅಮಾನತನ್ನ ರದ್ದುಪಡಿಸಿದ್ದರು. ಮಹೇಶ್ ಮತ್ತೆ ಕೆಲಸ ಮುಂದುವರೆಸಬೇಕಿದ್ದು ಇದಕ್ಕೆ ಗ್ರಾಮದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.

ಕೇಂದ್ರ ಕಛೇರಿಯಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸಲು ತೀರ್ಮಾನಿಸಿದ ನಿರ್ದೇಶಕಿ ಮಹದೇವಮ್ಮ ತಮ್ಮ ಪತಿಯ ಜೊತೆ ಮೈಸೂರಿನತ್ತ ಹೊರಟರು. ಮುಂಚಿತವಾಗಿ ಬಸ್ ನಿಲ್ದಾಣಕ್ಕೆ ಬಂದ ಪತಿ ಬಸವರಾಜು ರನ್ನ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಕ್ರಮ ಕೂಟಕಟ್ಟಿಕೊಂಡು ಬಸವರಾಜ್ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ.

ಬಿಡಿಸಲು ಬಂದ ಮಗ ಸದಾಶಿವ ಮೇಲೂ ಹಲ್ಲೆಯಾಗಿದೆ. ಹಲ್ಲೆ ನಡೆಸಿದ ದೃಶ್ಯವನ್ನ ಸ್ಥಳೀಯರು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಪತಿ ಮೇಲೆ ಹಲ್ಲೆ ನಡೆಸಿದ ಗುಂಪಿನ ವಿರುದ್ದ ಮಹದೇವಮ್ಮ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.