ನಂಜನಗೂಡು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳತೆ, ಪ್ರಾಮಾಣಿಕತೆ ಮತ್ತು ದೇಶಸೇವೆಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ರಾಷ್ಟ್ರದ ಪ್ರಗತಿಗೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಕರೆ ನೀಡಿದರು.

ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮವನ್ನು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ತತ್ವಗಳು ಇಂದಿಗೂ ಇಡೀ ವಿಶ್ವಕ್ಕೆ ಮಾದರಿಯಾಗಿವೆ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಸರಳತೆ, ಪ್ರಾಮಾಣಿಕತೆ ಹಾಗೂ ದೇಶದ ಮೇಲಿನ ಅಪಾರ ಬದ್ಧತೆಯಿಂದ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಇಬ್ಬರು ಮಹನೀಯರ ಜೀವನಾದರ್ಶಗಳು ಸದಾ ನಮ್ಮೆಲ್ಲರಿಗೂ ದಾರಿದೀಪವಾಗಲಿ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ಮುಖ್ಯ ಭಾಷಣಕಾರ ನಂಜುಂಡಯ್ಯ ಮಾತನಾಡಿ, ಮೋಹನದಾಸ ಕರಮ ಚಂದ ಗಾಂಧೀಜಿಯವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯಾಗಿ ರೂಪುಗೊಳ್ಳಲು ಕಾರಣವಾದ ಘಟನೆಗಳು ಮತ್ತು ಅವರ ಜೀವನದ ಪರಿವರ್ತನೆಯ ಹಾದಿಯನ್ನು ಇಂದಿನ ಪೀಳಿಗೆ ಅವಲೋಕನ ಮಾಡಿಕೊಳ್ಳಬೇಕು ಎಂದರು.

ವ್ಯಕ್ತಿಗಳು ಬದಲಾದಾಗ ಮಾತ್ರ ವ್ಯಕ್ತಿತ್ವ ಬದಲಾಗುತ್ತದೆ. ಗಾಂಧೀಜಿಯವರು ಇಂದು ನಮ್ಮ ನಡುವೆ ಇಲ್ಲದಿದ್ದರೂ ಭಾರತದ ಪ್ರತಿಯೊಂದು ಮನೆಯ ಮಗುವಿಗೂ ಗಾಂಧೀಜಿ ಯಾರು ಎಂಬುದು ತಿಳಿದಿದೆ. ಅವರ ಬದುಕು ಮತ್ತು ಹೋರಾಟದ ಪ್ರಭಾವ ಅಷ್ಟೊಂದು ವಿಶಾಲವಾಗಿದೆ ಎಂದು ಹೇಳಿದರು.

1893ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಸಂದರ್ಭದಲ್ಲಿ ಗಾಂಧೀಜಿಯವರು ವರ್ಣಭೇದ ಹಾಗೂ ಜಾತಿ ತಾರತಮ್ಯದ ಕಹಿ ಅನುಭವವನ್ನು ಎದುರಿಸಿದರು. ಈ ಘಟನೆಗಳು ಅವರ ಚಿಂತನೆ ಹಾಗೂ ವ್ಯಕ್ತಿತ್ವದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾದವು. ನಂತರ ಭಾರತಕ್ಕೆ ಮರಳಿದ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಜನರನ್ನು ಸಂಘಟಿಸಿ ಹೋರಾಟಕ್ಕೆ ಮುನ್ನಡೆ ನೀಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಕಡೆ ಕ್ರಾಂತಿಕಾರಿ ಹೋರಾಟಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಗಾಂಧೀಜಿಯವರ ನೇತೃತ್ವದಲ್ಲಿ ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ಶಾಂತಿಯುತ ಹೋರಾಟಗಳು ನಡೆದವು. ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ ಸೇರಿದಂತೆ ಹಲವು ಚಳುವಳಿಗಳ ಮೂಲಕ ಬ್ರಿಟಿಷರ ವಿರುದ್ಧ ಜನಶಕ್ತಿಯನ್ನು ಒಗ್ಗೂಡಿಸಿದರು ಎಂದು ವಿವರಿಸಿದರು.

ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳ ಜೀವನ, ಪ್ರಾಮಾಣಿಕತೆ ಮತ್ತು ದೇಶದ ಮೇಲಿನ ನಿಷ್ಠೆಯನ್ನೂ ಇಂದಿನ ಪೀಳಿಗೆ ಸ್ಮರಿಸಬೇಕು. ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ದೇಶದ ಸವಾಲುಗಳನ್ನು ಧೈರ್ಯದಿಂದ ಎದುರಿಸಿದ ಅವರು, ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆಯ ಮೂಲಕ ಸೈನಿಕರು ಹಾಗೂ ರೈತರ ಮಹತ್ವವನ್ನು ಎತ್ತಿ ತೋರಿಸಿದರು ಎಂದು ನಂಜುಂಡಯ್ಯ ಹೇಳಿದರು.

ತಹಶೀಲ್ದಾರ್ ಡಾ. ಸ್ಮಿತಾ ರಾಮು ಮಾತನಾಡಿ, ಮಹಾತ್ಮ ಗಾಂಧೀಜಿಯವರು ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಚರಕ ಮತ್ತು ಖಾದಿಯ ಮಹತ್ವವನ್ನು ಜನರಿಗೆ ತಿಳಿಸಿ ಸ್ವಾವಲಂಬನೆಯ ಸಂದೇಶ ಸಾರಿದ್ದರು. ಖಾದಿ ಹಾಗೂ ಗ್ರಾಮೋದ್ಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಚಿಂತನೆ ಹೊಂದಿದ್ದರು ಎಂದರು.

ನಂಜನಗೂಡು ತಾಲೂಕಿನ ಬದನವಾಳು ಹಾಗೂ ತಗಡೂರು ಗ್ರಾಮಗಳಿಗೆ ಸ್ವತಃ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿರುವುದು ಈ ಭಾಗದ ಹೆಮ್ಮೆ. ಗಾಂಧೀಜಿಯವರ ಪಾದಸ್ಪರ್ಶವಾದ ನಂಜನಗೂಡು ಪುಣ್ಯಭೂಮಿಯಾಗಿದೆ. ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಅಭಿವೃದ್ಧಿಪಡಿಸಲು ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಉಪವಾಸ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ ಸೇರಿದಂತೆ ಹಲವು ಚಳುವಳಿಗಳ ಮೂಲಕ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದರು. ಸತ್ಯ, ಅಹಿಂಸೆ ಹಾಗೂ ಪ್ರಾಣಿ ಹಿಂಸೆ ಮಾಡಬಾರದು ಎಂಬ ಸಂದೇಶವನ್ನು ಸಾರಿದರು. ಅವರ ಅಹಿಂಸೆಯ ತತ್ವದ ಗೌರವಾರ್ಥವಾಗಿ ವಿಶ್ವಸಂಸ್ಥೆಯು ಅಕ್ಟೋಬರ್ ೨ರಂದು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಶೀಲ್ದಾರ್ ಡಾ. ಸ್ಮಿತಾ ರಾಮು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ನಗರ ಬ್ಲಾಕ್ ಅಧ್ಯಕ್ಷ ಸಿ.ಎಂ. ಶಂಕರ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸವೇಗೌಡ, ಮುಖ್ಯ ಭಾಷಣಕಾರ ನಂಜುಂಡಯ್ಯ, ಮುಖಂಡರಾದ ಗಾಯತ್ರಿ ಮೋಹನ್, ಮಂಜುನಾಥ್, ಶ್ರೀಧರ್, ಗೋವಿಂದರಾಜ್, ಅಬ್ದುಲ್ ಖಾದರ್, ಗುರುಮಲ್ಲಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.