ನಂಜನಗೂಡು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ಭಯ ಹುಟ್ಟಿಸಿದ ಆರೋಪದ ಮೇಲೆ 22 ವರ್ಷದ ಯುವಕನ ವಿರುದ್ಧ ಹುಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಮ್ಮದ್ ಅಫ್ಷಾನ್ 22 ವರ್ಷ ಬಂಧಿತ ಆರೋಪಿಯಾಗಿದ್ದಾನೆ. ಹುಲ್ಲಹಳ್ಳಿ ಗ್ರಾಮದ ಮೈಸೂರು ರಸ್ತೆ ಹಾಗೂ ರಾಜ್ ಕುಮಾರ್ ರಸ್ತೆ ಜಂಕ್ಷನ್ ಬಳಿ ಅಪರಾಧ ತಡೆ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಒಬ್ಬ ಯುವಕ ಕೈಯಲ್ಲಿ ಚಾಕು ಹಿಡಿದು ಗಲಾಟೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ.

ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲಿಸಿದಾಗ ಯುವಕನೊರ್ವ ಸಾರ್ವಜನಿಕರಿಗೆ ಬಾಯಿಗೆ ಬಂದಂತೆ ಬೈದು, ಚಾಕು ತೋರಿಸಿ ಬೆದರಿಸುತ್ತಿದ್ದ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ಮಾದಕ ವಸ್ತುವಾದ ಗಾಂಜಾವನ್ನು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ಪರೀಕ್ಷೆಯಲ್ಲೂ ಆತ ಗಾಂಜಾ ಸೇವಿಸಿರುವುದು ಪಾಸಿಟಿವ್ ಎಂದು ವರದಿಯಲ್ಲಿ ತಿಳಿದುಬಂದಿದೆ.

ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಕಲಂ-27(ಬಿ) NDPS Act-1985, GSC No: 106/2026 ರೀತ್ಯಾ ಅಸಂಜ್ಞೇಯ ಪ್ರಕರಣ, ಕಲಂ-129(ಜ) BNSS ರೀತ್ಯಾ ಸ್ವಯಂ ವರದಿ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಘಟನೆ ಕುರಿತು ವಿಶೇಷ ಕಾರ್ಯನಿರ್ವಹಕ ದಂಡಾಧಿಕಾರಿಗಳು ಮತ್ತು ಅಪರ ಪೊಲೀಸ್ ಅಧೀಕ್ಷಕರ ಕಚೇರಿ, ಮೈಸೂರು ಇವರಿಗೆ ವರದಿ ಸಲ್ಲಿಸಲಾಗಿದೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.