ಮೈಸೂರು: ದನಕ್ಕೆ ನೀರು ಕುಡಿಸಲು ಹೋದ ವೇಳೆ ಹಗ್ಗದ ಸಮೇತ ಎತ್ತುಗಳು ಎಳೆದ ಸಂದರ್ಭ ಆಯತಪ್ಪಿ ಕಬಿನಿ ಬಲದಂಡೆ ನಾಲೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸರಗೂರು ತಾಲೂಕಿನ ಕೊತ್ತೆಗಾಲದಲ್ಲಿ ನಡೆದಿದೆ.
ಕೊತ್ತೇಗಾಲದ ನ ನಿವಾಸಿ ಸರಗೂರಿನ ಶ್ರೀ ಜಯಚಾಮರಾಜೇಂದ್ರ ಕ್ರೀಡಾಂಗಣದ ಹತ್ತಿರ ಮುಖ್ಯ ರಸ್ತೆಯಲ್ಲಿ ಗೌರಿ ಮೆಡಿಕಲ್ಸ್ ಹಾಗೂ ಗಿರಿ ಟೀಸ್ಟಾಲ್ ನ ಮಾಲೀಕ ಗಿರೀಶ್ ಜಿ.ಎಸ್(37) ಮೃತಪಟ್ಟ ದುರ್ದೈವಿ. ಈತ ಗ್ರಾಮದಲ್ಲಿ ದನಗಳಿಗೆ ನೀರು ಕುಡಿಸಲೆಂದು ನಾಲೆಯ ಕಡೆ ಹೋಗಿದ್ದ ಸಂದರ್ಭದಲ್ಲಿ ಅವುಗಳು ನೀರು ಕುಡಿಯುವ ವೇಳೆ ಈತನನ್ನು ಹಗ್ಗದ ಸಮೇತ ಎಳೆದ ಸಂದರ್ಭ ಆಯತಪ್ಪಿ ನಾಲೆಗೆ ಬಿದ್ದಿದ್ದಾರೆ.
ನೀರು ಕುಡಿದ ನಂತರ ದನಗಳು ಮನೆಗೆ ತೆರಳಿದ್ದರೂ ಗಿರೀಶ್ ಮನೆಗೆ ಹೋಗಿರಲಿಲ್ಲ. ಆತ ಎಲ್ಲಿಯೋ ಹೊಗಿರಬಹುದು ಸ್ವಲ್ಪ ಹೊತ್ತಿನ ನಂತರ ಬರಬಹುದೆಂದು ಮನೆಯವರು ನಂಬಿದ್ದರು. ಆದರೆ ರಾತ್ರಿಯಾದರು ಬಾರದ್ದಿದ್ದಾಗ ಗಾಬರಿಯಿಂದ ಹುಡುಕಾಟ ನಡೆಸಿದ್ದಾರೆ. ಮಾರನೇ ದಿನ ನಾಲೆಯಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿ ಶವವನ್ನು ಮೇಲೆತ್ತಿ ಸರಗೂರಿನ ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆಯನ್ನು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಪಾರ್ಥಸಾರತಿ ಹಾಗೂ ಸಿಬ್ಬಂದಿ ನಡೆಸಿ ಬಳಿಕ ಮೃತರ ಕುಟುಂಬದವರಿಗೆ ನೀಡಿದ್ದು, ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತರಿಗೆ ತಾಯಿ, ತಂದೆ,ಪತ್ನಿ ಹಾಗೂ ಒಂದೂವರೆ ವರ್ಷದ ಮಗುವಿದ್ದು, ಆಸ್ಪತ್ರೆಯ ಮುಂಭಾಗ ಹಲವರು ಮಗುವನ್ನು ನೋಡಿ ದುಃಖಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

