ನಂಜನಗೂಡು: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ನಂಜನಗೂಡು ಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂಜನಗೂಡು ಪಟ್ಟಣದ ನಿವಾಸಿ ಮೊಹಮ್ಮದ್ ಮಸೂದ್ (30) ಬಂಧಿತ ಆರೋಪಿ.

ನಂಜನಗೂಡು ಪಟ್ಟಣದ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮೋಟಾರ್ ಬೈಕ್ ನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಿ.ಎಂ ರವೀಂದ್ರ, ಪಿಎಸ್ಐ ಕೃಷ್ಣಕಾಂತಕೋಳಿ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ.

ಈ ವೇಳೆ ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ಬಂಧಿಸಿ 29 ಪೊಟ್ಟಣಗಳ ಒಟ್ಟು 540 ಗ್ರಾಂ ಗಾಂಜಾ, 550 ರೂ. ನಗದು ಹಣ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮೈಸೂರು ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಪೊಲೀಸ್ ಅಧೀಕ್ಷಕರಾದ ಮಲ್ಲಿಕ್, ನಾಗೇಶ್, ಡಿವೈಎಸ್ಪಿ ರಘು ರವರ ಮಾರ್ಗದರ್ಶನದಲ್ಲಿ ನಂಜನಗೂಡು ಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಿಎಂ ರವೀಂದ್ರ, ಪಿಎಸ್ಐ ಕೃಷ್ಣಕಾಂತ ಕೋಳಿ, ಸಿಬ್ಬಂದಿಗಳಾದ ತಿಮ್ಮಯ್ಯ, ಯು.ಎಸ್ ಶಿವಕುಮಾರ್, ಚೇತನ್ ಕುಮಾರ್, ಮಹೇಶ್, ನವೀನ್ ಕುಮಾರ್, ಮುರುಳೀಧರ, ಮಹೇಶ್ ಜಗತಾಪ, ಪೀರಪ್ಪ ಹದಿಮನಿ, ಸರಿತಾ, ಕೃಷ್ಣ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.