ನಂಜನಗೂಡು: ಸಾರ್ವಜನಿಕರಿಗೆ, ಹಾಸ್ಟೆಲ್ ಮಕ್ಕಳಿಗೆ ಕಿರಿಕಿರಿ ನೀಡುತ್ತಿರುವ ಕ್ರಷರ್ ಎಂ.ಸ್ಯಾಂಡ್ ಧೂಳು ಇದೀಗ ಕೆರೆಯನ್ನೂ ಆವರಿಸಿಕೊಳ್ಳುವ ಮೂಲಕ ಗ್ರಾಮಸ್ಥರ ನಿದ್ದೆ ಕೆಡಿಸುತ್ತಿದೆ.
ಈ ಸಂಬಂಧ ಕ್ರಷರ್ ಮಾಲೀಕನಿಗೆ ನೊಟೀಸ್ ಜಾರಿ ಮಾಡಿದ್ದರೂ ಕ್ಯಾರೆ ಎನ್ನದೆ ರಾಜಾರೋಷವಾಗಿ ಕೆರೆಯ ಅಂಗಳದಲ್ಲಿ ಸುರಿಯುತ್ತಿದ್ದಾನೆ. ರಸ್ತೆ,ಹಾಸ್ಟೆಲ್ ಭೀತಿ ಸೃಷ್ಟಿಸಿದ ಎಂ.ಸ್ಯಾಂಡ್ ಇದೀಗ ಕೆರೆಯನ್ನ ಸ್ವಾಹ ಮಾಡಲು ಮುಂದಾಗುತ್ತಿದೆ.
ನಂಜನಗೂಡು ತಾಲ್ಲೂಕು ಕಸುವಿನಹಳ್ಳಿಯ ಸರ್ವೆ ನಂ.102/3 ರಲ್ಲಿ ಸಾರ್ವಜನಿಕ ಕೆರೆ ಇದೆ. ಸಾಕಷ್ಟು ವರ್ಷಗಳಿಂದ ಮಳೆ ಬರದಿದ್ದರೂ ನೀರು ಸಮೃದ್ದಿಯಾಗಿದ್ದು ಜನ ಜಾನುವಾರುಗಳಿಗೆ ಉಪಯೋಗವಾಗುತ್ತಿದೆ. ಇಂತಹ ಕೆರೆ ಮೇಲೆ ಕ್ರಷರ್ ಮಾಲೀಕನ ಕೆಂಗಣ್ಣು ಬಿದ್ದಿದೆ. ಕ್ರಷರ್ ನಿಂದ ಬರುವ ವೇಸ್ಟ್ ಧೂಳನ್ನ ಸಾರ್ವಜನಿಕ ರಸ್ತೆಗೆ ಸುರಿದಿದ್ದಾರೆ.
ಅಂಬೇಡ್ಕರ್ ಹಾಸ್ಟೆಲ್ ಆವರಣದಲ್ಲೂ ಸುರಿದಿದ್ದಾರೆ. ಇದೀಗ ಸಮೀಪದಲ್ಲಿರುವ ಕೆರೆಯ ಅಂಗಳಕ್ಕೂ ತಲುಪಿ ರಾಶಿ ರಾಶಿ ಮಣ್ಣು ಸುರಿಯುತ್ತಿದ್ದಾರೆ. ಈ ಸಂಬಂಧ ಸ್ಥಳೀಯರು ಗ್ರಾಮ ಪಂಚಾಯ್ತಿ ಕಚೇರಿಗೆ ಸಾಕಷ್ಟು ಬಾರಿ ದೂರು ನೀಡಿದ್ದಾರೆ.
ಕ್ರಷರ್ ಮಾಲೀಕನಿಗೆ ಪಿಡಿಓ ನೆಪಮಾತ್ರಕ್ಕೆ ನೋಟೀಸ್ ಜಾರಿಗೊಳಿಸಿ ಕೈಕಟ್ಟಿ ಕುಳಿತಿದ್ದಾರೆ. ಸಧ್ಯೆ ಕೆರೆಗೆ ಮಾರಕವಾಗುತ್ತಿರುವ ಕ್ರಷರ್ ದೂಳಿನ ಹಾವಳಿ ತಪ್ಪಿಸಬೇಕಿದೆ. ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸಿ ಕ್ರಷರ್ ಮಾಲೀಕನ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.

