ನಂಜನಗೂಡು: ನುಗು ಬಲದಂಡೆ ನಾಲೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಸ್ಥಳಕ್ಕೆ ತೆರಳಿದ ರೈತರು ದಾಳಿ ನಡೆಸಿ ವಾಹನಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂಜನಗೂಡು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದ ನುಗು ಬಲದಂಡೆ ನಾಲೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡಲಾಗುತ್ತಿತ್ತು.
ಕಾವೇರಿ ನೀರಾವರಿ ನಿಗಮದಿಂದ ಯಾವುದೇ ಅನುಮತಿ ಪಡೆಯದೆ ನುಗು ನಾಲೆಯ ಮಣ್ಣನ್ನು ಅಗೆದು ಲೇಔಟ್ ಗಳಿಗೆ ಸಾಗಾಣಿಕೆ ಮಾಡಲಾಗುತ್ತಿತ್ತು. ಸ್ಥಳಕ್ಕೆ ತೆರಳಿದ ಏಕೀಕರಣದ ಹಾದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್ ಮತ್ತು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮವಾಗಿ ಮಣ್ಣನ್ನು ಸಾಗಾಣಿಕೆ ಮಾಡುತ್ತಿರುವುದನ್ನು ನಂಜನಗೂಡು ಗ್ರಾಮಾಂತರ ಪೊಲೀಸರಿಗೆ ತಿಳಿಸಿ, ಜೆಸಿಬಿಯಂತ್ರ ಮತ್ತು ವಾಹನಗಳನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು. ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಮತ್ತು ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ದರ್ಶನ್ ಆಗಮಿಸಿ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್ ಮಾತನಾಡಿ, ನಂಜನಗೂಡು ತಾಲ್ಲೂಕಿನ ಕಬಿನಿ ಮತ್ತು ನುಗು ನಾಲೆಗಳಲ್ಲಿ ಅಕ್ರಮವಾಗಿ ಮಣ್ಣನ್ನು ಸಾಗಾಣಿಕೆ ಮಾಡಲಾಗುತ್ತಿದೆ. ಅಧಿಕಾರಿಗಳು ಕೂಡ ಶಾಮಿಲಾಗಿರುವುದು ಕಂಡುಬರುತ್ತಿದೆ. ನಾಲೆಗಳಿಗಲ್ಲಿ ಮಣ್ಣು ಮಾರಾಟ ಮಾಡುವಲ್ಲಿ ಅಧಿಕಾರಿಗಳೇ ಮುಂದಾಗಿದ್ದಾರೆ. ಕೆಲವೆಡೆ ಅನುಮತಿಯನ್ನು ನೀಡಿ ಮಣ್ಣನ್ನು ಅಧಿಕಾರಿಗಳು ಮಾರಾಟ ಮಾಡಿಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ನಾಲೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾದ ಸಂದರ್ಭದಲ್ಲಿ ನಾಲೆಗಳು ಒಡೆದು ಹೋಗುತ್ತವೆ ಎಂಬ ಪರಿಜ್ಞಾನವೂ ಕೂಡ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ಅಧಿಕಾರಿಗಳು ಅನುಮತಿ ನೀಡಿ ಮಣ್ಣು ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಇಲ್ಲವಾದಲ್ಲಿ ಕಾವೇರಿ ನೀರಾವರಿ ನಿಗಮದ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರೈತ ಸಂಘದ ಸಿಂಧುವಳ್ಳಿ ಮಹದೇವನಾಯಕ, ತಿಮ್ಮನಾಯಕ, ಮಹದೇವನಾಯಕ, ರಾಮಚಂದ್ರ ಹಾಜರಿದ್ದರು.

