ನಂಜನಗೂಡು: ಇತಿಹಾಸದ ಪುಟ ಸೇರಿರುವ ಭೀಮಾ ಕೋರೆಂಗಾವ್ ವಿಜಯೋತ್ಸವದ ಇತಿಹಾಸವನ್ನು ಇಂದಿನ ಮಕ್ಕಳಿಗೆ ಪಠ್ಯದ ಪುಸ್ತಕದಲ್ಲಿ ಸೇರಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಹಾಗೂ ಖ್ಯಾತ ವಕೀಲ ಉಮೇಶ್ ಹೇಳಿದರು.

ನಂಜನಗೂಡು ನಗರದ ಡಾ. ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಆಯೋಜನೆ ಮಾಡಲಾಗಿದ್ದ ಭೀಮಾ ಕೋರೆಂಗಾವ್ ವಿಜಯೋತ್ಸವದ ಅಂಗವಾಗಿ ಸಂಘ ಪರಿವಾರದ ಒಳಸಂಚು ಹಾಗೂ ದಲಿತ ಚಳುವಳಿಗಳ ಪ್ರತಿರೋಧ ಜನ ಜಾಗೃತಿ ಸಮಾವೇಶದ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.

ಭೀಮಾ ಕೋರೆಂಗಾವ್ ವಿಜಯೋತ್ಸವವನ್ನು ನಂಜನಗೂಡಿನಲ್ಲಿ ಜ.11 ರಂದು ಬೃಹತ್ ಜನ ಜಾಗೃತಿ ಸಮಾವೇಶ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಚಾರ ರಥವು ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಪ್ರಚಾರ ಮಾಡಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತದೆ. ಭೀಮಾ ಕೋರೆಂಗಾವ್ ವಿಜಯೋತ್ಸವವು ಹೊನ್ನಿಗಾಗಿ, ಹೆಣ್ಣಿಗಾಗಿ, ಮಣ್ಣಿಗಾಗಿ ನಡೆದ ಯುದ್ಧವಲ್ಲ. ಸ್ವಾಭಿಮಾನದ ಸಂಕೇತ ಯುದ್ಧವಾಗಿದೆ.

ಭೀಮಾ ತೀರದಲ್ಲಿ ಸುಮಾರು 25 ಸಾವಿರ ಪೇಶ್ವೆಗಳ ವಿರುದ್ಧ 500 ಜನ‌ ಸೈನಿಕರು ಸದೆ ಬಡಿದ ದಿನವೇ ಭೀಮಾ ಕೋರೆಂಗಾವ್ ವಿಜಯೋತ್ಸವ ಮತ್ತು ಹೊಸ ವರ್ಷದ ದಿನವಾಗಿದೆ. ಭಾರತ ದೇಶದಲ್ಲಿ ಇದೊಂದು ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ರಾಮಾಯಣ, ಮಹಾಭಾರತದ ಕಥೆಗಳು ಪಠ್ಯಪುಸ್ತಕಗಳಲ್ಲಿ ಸೇರಿಸಲಾಗಿದೆ ಅದರಂತೆಯೇ ಅದರಂತೆಯೇ ಸರ್ಕಾರವು ಭೀಮಾ ಕೋರೆಂಗಾವ್ ವಿಜಯೋತ್ಸವದ ಇತಿಹಾಸದ ಬಗ್ಗೆ ಪಠ್ಯ ಪುಸ್ತಕದಲ್ಲಿ ಸೇರಿಸುವ ಕೆಲಸ ಮಾಡಬೇಕು. ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಪತ್ರವನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.

ನಂತರ ದಸಂಸ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್ ಮಾತನಾಡಿ, ಇದೇ ಜ.11ರಂದು ಭಾನುವಾರ ನಂಜನಗೂಡಿನಲ್ಲಿ ಭೀಮಾ ಕೋರೆಂಗಾವ್ ವಿಜಯೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಜೂನಿಯರ್ ಕಾಲೇಜು, ಮೈದಾನದಿಂದ ಮೆರವಣಿಗೆಗೆ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ನಂತರ ಅಂಬೇಡ್ಕರ್ ಭವನದ ಆವರಣದಲ್ಲಿ ಬಹಿರಂಗ ಸಭೆ ನಡೆಯಲಿದೆ.

ಹಿರಿಯ ಸಾಹಿತಿಗಳಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಡಾ. ಬಿ.ಆರ್ ಅಂಬೇಡ್ಕರ್ ಸಂಶೋಧನಾ ವಿಸ್ತರಣಾ ಕೇಂದ್ರ ಮೈಸೂರು ವಿಶ್ವವಿದ್ಯಾನಿಲಯದ ಜೆ.ಸೋಮಶೇಖರ್ ಮುಖ್ಯ ಭಾಷಣ ಮಾಡಲಿದ್ದಾರೆ. ಮೈಸೂರಿನ ಸಹಾಯಕ ಪೊಲೀಸ್ ಆಯುಕ್ತರಾದ ರವಿಪ್ರಸಾದ್ ರವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ.

ರೈತ ಹೋರಾಟಗಾರರಾದ ಚುಕ್ಕಿ ನಂಜುಂಡಸ್ವಾಮಿ ಗೌರವ ಉಪಸ್ಥಿತಿಯಲ್ಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಸಂಸ ಸಂಚಾಲಕರಾದ ದೇವರಸನಹಳ್ಳಿ ಪುಟ್ಟಸ್ವಾಮಿ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್, ದೇವರಸನಹಳ್ಳಿ ಪುಟ್ಟಸ್ವಾಮಿ, ದಸಂಸ ಜಿಲ್ಲಾ ಸಂಚಾಲಕರಾದ ಮಲ್ಲಹಳ್ಳಿ ನಾರಾಯಣ್, ಚುಂಚನಹಳ್ಳಿ ಮಲ್ಲೇಶ್, ಕಾರ್ಯ ಬಸವಣ್ಣ, ತಾಲ್ಲೂಕು ಸಂಚಾಲಕರಾದ ಸುರೇಶ್ ಶಂಕರಪುರ, ಕಳಲೆ ಕುಮಾರ್, ಗಟ್ಟವಾಡಿ ಮಹೇಶ್, ರಾಜೂರು ನಟರಾಜು, ಕೆಲವಾದಿ ಮಹಾಸಭಾ ಅಧ್ಯಕ್ಷ ಉಮೇಶ್ ರಾಜ್, ಯಶವಂತ್ ಕುಮಾರ್, ಕೃಷ್ಣಮೂರ್ತಿ, ಜಯರಾಮ್, ಚೆಲುವ ಸ್ವಾಮಿ, ಕೋಡಿ ನರಸೀಪುರ ಬಸವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.