ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಮಹಿಳಾ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನಲೆ ವಕೀಲ ಹಾಗೂ ಅವರ ಕುಟುಂಬದ 5 ಮಂದಿ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಕೀಲೆ ಕಾಜಲ್ ಪ್ರಸಾದ್ (29) ಎಂಬುವರೇ ವಂಚನೆಗೆ ಒಳಗಾದವರು. ಮದುವೆ ಆಗುವುದಾಗಿ ವಂಚಿಸಿದ ನವೀನ್ ಪೊನ್ನಯ್ಯ ಹಾಗೂ ಇವರ ತಂದೆ ಪಿ.ಕೆ.ಪೊನ್ನಯ್ಯ,ತಾಯಿ ಎಂ.ಬಿ.ಕುಮಾರಿ,ಪತ್ನಿ ಲಕ್ಷಿತ್ ಚಿಂಗಪ್ಪ,ದೊಡ್ಡಮ್ಮನ ಮಗಳು ಸುಮ್ಮ ಹಾಗೂ ಬೆಳ್ಳಿಯಪ್ಪ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.

ಖಾಸಗಿ ಕಂಪನಿಯೊಂದರಲ್ಲಿ ಕಾಜಲ್ ಪ್ರಸಾದ್ ರವರು ಲೀಗಲ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದು ವಕೀಲ ನವೀನ್ ಪೊನ್ನಯ್ಯ ಜೊತೆ ಹಲವು ವರ್ಷಗಳಿಂದ ಪರಿಚಯ ಇತ್ತು. ನವೀನ್ ಪೊನ್ನಯ್ಯ ರವರು ತಮ್ಮಪತ್ನಿ ಜೊತೆ ಹೊಂದಾಣಿಕೆ ಇಲ್ಲವೆಂದು ಕಾರಣ ನೀಡಿ  ವಿಚ್ಛೇದನ ಪಡೆದಿರುವುದಾಗಿ ಕಾಜಲ್ ಪ್ರಸಾದ್ ಜೊತೆ ಹೆಚ್ಚು ಒಡನಾಟ ಬೆಳೆಸಿಕೊಂಡಿದ್ದಾರೆ.

ನವೀನ್ ಪೊನ್ನಯ್ಯ ರವರ ತಾಯಿ ಕುಮಾರಿ ರವರು ಕಾಜಲ್ ಪ್ರಸಾದ್ ರವರ ಮನೆಗೆ ಬಂದು ಮದುವೆ ಪ್ರಸ್ತಾಪ ಮಾಡಿ ಎಂಗೇಜ್ ಮೆಂಟ್ ಮಾಡಿಕೊಂಡು ಡಿಸೆಂಬರ್ 7 ರಂದು ವಿವಾಹ ನಿಶ್ಚಯಿಸಿದ್ದಾರೆ. ಮದುವೆ ಫಿಕ್ಸ್ ಆದ ಹಿನ್ನಲೆ ಇಬ್ಬರೂ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾರೆ. ಕೆಲವು ದಿನಗಳ ಹಿಂದೆ ನವೀನ್ ಪೊನ್ನಯ್ಯ ಮೊಬೈಲ್ ಮೂಲಕ ತನಗಿನ್ನೂ ವಿಚ್ಛೇದನ ಆಗಿಲ್ಲ,ಪರಿಹಾರ ವಿಚಾರ  ಕಂಡುಕೊಳ್ಳುವುದಾಗಿ ಹಾಗೂ ನಮ್ಮ ಯೋಜನೆಯಂತೆ ಮದುವೆ ನಡೆಯಲಿದೆ ಎಂದು ಮೆಸೇಜ್ ಮಾಡಿ ಸ್ವಿಚ್ ಆಫ್ ಮಾಡಿದ್ದಾರೆ.

ಇದೀಗ ಮದುವೆ ಆಮಂತ್ರಣ ಪತ್ರಿಕೆಗಳ ವಿತರಿಸಲಾಗಿದೆ. ಆದ್ರೆ ನವೀನ್ ಪೊನ್ನಯ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ. ತಂದೆ ತಾಯಿ ಜೊತೆ ಮಾತನಾಡಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ಕೋರ್ಟ್ ನಿಂದ ಸುಳ್ಳು ಡಿಕ್ರಿ ಪಡೆದು ನನ್ನನ್ನ ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿರುವ ನವೀನ್ ಪೊನ್ನಯ್ಯ ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಕಾಜಲ್ ಪ್ರಸಾದ್ ಪ್ರಕರಣ ದಾಖಲಿಸಿದ್ದಾರೆ.