ನಂಜನಗೂಡು: ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಕ್ಷೇತ್ರದ ಜನರು ಸಹಕಾರ ಮತ್ತು ಸಮಯವನ್ನು ನೀಡಿದರೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.
ನಂಜನಗೂಡು ತಾಲ್ಲೂಕಿನ ದೇವಿರಮ್ಮನಹಳ್ಳಿ ಹುಂಡಿ, ದೇವರಮ್ಮನಹಳ್ಳಿಪಾಳ್ಯ, ವಳಗೆರೆ, ಬ್ಯಾಳಾರುಹುಂಡಿ, ಸೂರಹಳ್ಳಿ, ಮಾಕನಪುರ, ಗೋಣತಗಾಲ, ಮಾಡರಹಳ್ಳಿ ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ವಳಗೆರೆ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ವಿವಿಧ ಗ್ರಾಮಗಳಲ್ಲಿ ಸುಮಾರು 1.80 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನಾಲ್ಕನೇ ದಿನಕ್ಕೆ 10.86 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ದೇವೆ. ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಮತ್ತಷ್ಟು ಶಕ್ತಿ ತುಂಬುವ ಕೆಲಸವನ್ನು ಜನರು ಮಾಡಬೇಕು ಎಂದು ಹೇಳಿದರು.
ಜಮೀನುಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ, ಸ್ಮಶಾನಗಳಿಗೆ ಜಾಗ ಗುರುತು ಸೇರಿದಂತೆ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು. ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿರುವ ಶಾಸಕರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚನೆ ನೀಡಿದರು. ಪಿಂಚಣಿ, ಮನಸ್ವಿನಿ ಯೋಜನೆ, ವಿಧವಾ ವೇತನ ಸೇರಿದಂತೆ ವಿವಿಧ ವೇತನಗಳ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ನವಿಲೂರು ಗ್ರಾಪಂ ಅಧ್ಯಕ್ಷ ಮಹದೇವ, ಯೂತ್ ಕಾಂಗ್ರೆಸ್ ಅಧ್ಯಕ್ಷ ಚಂದನ್ ಗೌಡ, ಎಸ್.ಸಿ ಘಟಕದ ಅಧ್ಯಕ್ಷ ಉಪ್ಪಿನಹಳ್ಳಿ ಶಿವಣ್ಣ, ಎಸ್ಟಿ ಘಟಕದ ದೊರೆಸ್ವಾಮಿ ನಾಯಕ, ಶಿವಪ್ಪದೇವರು, ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ಬ್ಯಾಳಾರುಹುಂಡಿ, ರೈತ ಸಂಘದ ಮುಖಂಡ ವಳಗೆರೆ ಮಹದೇವಸ್ವಾಮಿ, ಗ್ರಾ.ಪಂ ಸದಸ್ಯರಾದ ಚನ್ನಬಸಪ್ಪ, ಜಯಲಕ್ಷ್ಮಿ, ಸ್ವಾಮಿ, ಸಿದ್ದಶೆಟ್ಟಿ, ಮಾಜಿ ಗ್ರಾಪಂ ಸದಸ್ಯ ಮಹೇಶ್ ಮುಖಂಡರಾದ ನಾರಾಯಣಶೆಟ್ಟಿ, ಸುರೇಶ್, ಸದಾಶಿವ ಮೂರ್ತಿ, ಮರಿಕಾಳೇಗೌಡ, ಮಾದೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

