ನಂಜನಗೂಡು : ದೇವಿರಮ್ಮನಹಳ್ಳಿ ಕೆರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮರುಜೀವ ಸಿಕ್ಕಿದೆ. ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ 949ನೇ ಕೆರೆಯಾಗಿ ಅಭಿವೃದ್ಧಿಪಡಿಸಿ ಗ್ರಾಮಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ದೇವಿರಮ್ಮನಹಳ್ಳಿ ಹಾಗೂ ದೇವಿರಮ್ಮನಹಳ್ಳಿ ಹುಂಡಿ ಗ್ರಾಮಗಳ ವ್ಯಾಪ್ತಿಯಲ್ಲಿರುವ 15.21 ಎಕರೆ ವಿಸ್ತೀರ್ಣದ ಕೆರೆಯನ್ನು ಒಟ್ಟು 16.77 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಧರ್ಮಸ್ಥಳ ಯೋಜನೆಯಿಂದ 10.75 ಲಕ್ಷ ರೂಪಾಯಿ ನೆರವು ನೀಡಲಾಗಿದೆ.

ಶಾಸಕ ದರ್ಶನ್ ಧ್ರುವನಾರಾಯಣ್ ಕಾರ್ಯಕ್ರಮ ಉದ್ಘಾಟಿಸಿ, ಕೆರೆ ಸಂರಕ್ಷಣೆ ಎಲ್ಲರ ಜವಾಬ್ದಾರಿ. ಕೆರೆ ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ಹೆಚ್ಚುವುದರ ಜೊತೆಗೆ ಕೃಷಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

ಮುಂದಿನ ಹಂತದಲ್ಲಿ 4.72 ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ತಷ್ಟು ಅಭಿವೃದ್ಧಿ, ವಾಕಿಂಗ್ ಪಾತ್, ಗೇಟ್, ಆಸನ ಹಾಗೂ ತಡೆಗೋಡೆ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸುವ ಯೋಜನೆ ಇದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎ.ಯೋಗೇಶ್, ಕೆರೆ ಪುನಶ್ಚೇತನದಿಂದ ಜನ-ಜಾನುವಾರುಗಳು ಹಾಗೂ ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗುವುದರ ಜೊತೆಗೆ ಅಂತರ್ಜಲ ಹೆಚ್ಚಲಿದೆ ಎಂದು ತಿಳಿಸಿದರು.

ಇದೇ ವೇಳೆ 300 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಶ್ರೀ ಗುರು ಮಲ್ಲೇಶ್ವರ ದಾಸೋಹ ಮಠದ ಮಾದಪ್ಪ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಕೆರೆ ಸಮಿತಿ ಅಧ್ಯಕ್ಷ ಡಿ.ಜಿ. ನಂದೀಶ್ ಅಧ್ಯಕ್ಷತೆ ವಹಿಸಿದ್ದರು. ಒಟ್ಟಿನಲ್ಲಿ, ಬರದ ನಾಡಿಗೆ ಜಲಸಂಜೀವಿನಿಯಾಗಿ ಮೂಡಿಬಂದಿರುವ ದೇವಿರಮ್ಮನಹಳ್ಳಿ ಕೆರೆಯ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ.