ನಂಜನಗೂಡು: ಇದು ಹೆಸರಿಗೆ ಮಾತ್ರ ಡೆಲಿವೆರಿ ಆಸ್ಪತ್ರೆ ಆದರೆ ಇಲ್ಲಿಯವರೆಗೆ ಯಾವ ಹೆರಿಗೆ ಸಹ ಆಗಿದ್ದಿಲ್ಲ. ಹೌದು.. ನಂಜನಗೂಡು ತಾಲ್ಲೂಕಿನ ಹೆಡತಲೆ ಗ್ರಾಮದಲ್ಲಿ ಈ ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡಲಾಗಿತ್ತು.
ಆನಂತರ ಅದನ್ನು 24/7 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೀಮಿತಗೊಳಿಸಲಾಗಿತ್ತು. ವಿಪರ್ಯಾಸ ಎಂದರೆ ಸಿಬ್ಬಂದಿ ಕೊರತೆ ನೆಪದಲ್ಲಿ ಹೆಡತಲೆ ಪ್ರಾಥಮಿಕ ಅರೋಗ್ಯ ಕೇಂದ್ರ ಇದೀಗ ಬೆಳಿಗ್ಗೆ ಹೊತ್ತಿನಲ್ಲಿ ಮಾತ್ರ ತೆರೆದಿರುತ್ತದೆ. ಸಂಜೆಯಾಗುತ್ತಿದ್ದಂತೆ ಬೀಗ ಜಡಿಯಲಾಗುತ್ತದೆ.
ಇದರಿಂದ ಹೆಡತಲೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸೊರುವ ಸುತ್ತಮುತ್ತಲಿನ ಹತ್ತಾರು ಗ್ರಾಮದ ಗ್ರಾಮಸ್ಥರು ರಾತ್ರಿ ವೇಳೆಯಲ್ಲಿ ಆರೋಗ್ಯ ಸಮಸ್ಯೆ ಎದುರಾದ್ರೆ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ತೆರಳಬೇಕಾದ ಅನಿವಾರ್ಯಾತೆ ಎದುರಾಗಿದೆ.
ಅಲ್ಲದೆ ಆಸ್ಪತ್ರೆ ಆವರಣದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು, ಹಲವು ಸಮಸ್ಯೆಗಳ ಆಗರವಾಗಿ ಹೆಡತಲೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಾರ್ಪಟ್ಟಿದೆ. ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಹೆಡತಲೆ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ಆರೋಗ್ಯ ಕೇಂದ್ರಗಳಿಗೆ ವೈದ್ಯರು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಸ್ಥಳೀಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

