ಮೈಸೂರು: ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳ 2025ರ ಫೆ.10, 11 ಮತ್ತು 12ರ ಮೂರು ದಿನಗಳ ಕಾಲ ನಡೆಯಲಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಿದ್ಧತೆಗಳ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 2019ರಲ್ಲಿ ನಡೆದ 11ನೇ ಕುಂಭಮೇಳ ಯಶಸ್ವಿಯಾಗಿ ನಡೆದಿದೆ. ಆನಂತರ 2021ರಲ್ಲಿ ಕೋವಿಡ್ ಕಾರಣದಿಂದಾಗಿ ಕುಂಭಮೇಳ ನಡೆದಿಲ್ಲ. ಹೀಗಾಗಿ ಈ ಬಾರಿ 12ನೇ ಕುಂಭಮೇಳ ಆಯೋಜಿಸಲಾಗಿದೆ.

ಫೆ.10, 11 ಮತ್ತು 12ರ ಮೂರು ದಿನಗಳ ಕಾಲ ನಡೆಯುವ ಮೇಳದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವರು. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳುವ ಸಂಬಂಧ ಮತ್ತೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನರಸೀಪುರದಲ್ಲಿ ಪೂರ್ವಭಾವಿ ಸಭೆ ನಡೆಸಲು ನಿಶ್ಚಯಿಸಲಾಗಿದೆ. ಕುಂಭಮೇಳಕ್ಕೆ ಬೇಕಾದ ತಾತ್ಕಾಲಿಕ ಸೇತುವೆ, ಹೋಮದ ಕೋಣೆ ಮೊದಲಾದವುಗಳ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸುವಂತೆ ಹೇಳಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಫೆ.10ರಂದು ಬೆಳಗ್ಗೆ 8.30ಕ್ಕೆ ಅಗಸ್ಥೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅನುಜ್ಞಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ನಡೆಯಲಿದೆ. . ಬೆಳಗ್ಗೆ 9 ಗಂಟೆಗೆ ಮಾಘ ಶುದ್ಧ ತ್ರಯೋದಶೀ ಪುಷ್ಯ ನಕ್ಷತ್ರ ಶ್ರೀ ಅಗಸ್ಥೇಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಕಲಶ ಸ್ಥಾಪನೆ, ಗಣಹೋಮ, ಅಭಿಷೇಕ, ದೇವತಾರಾಧನೆ, ಅಗ್ರಸ್ತ್ಯರ ಸಂಗ್ರಹ ಸಮೇತ ಯಾಗಶಾಲಾ ಪ್ರವೇಶ, ಪುಣ್ಯಾಹ, ವಾಸ್ತುಹೋಮಗಳು ನಡೆಯಲಿವೆ. ಅಂದು ಸಂಜೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಧ್ವಜಾರೋಹಣ ನಡೆಯಲಿದೆ ಎಂದರು.

ದೇಶದ ನಾಗರೀಕತೆ ಹುಟ್ಟಿದ್ದು ನದಿಯ ಇಕ್ಕೆಲ್ಲಗಳಲ್ಲಿ ಬೆಳೆದು ಬಂದಿದೆ. ನದಿಗಳು ನಮಗೆ ನಾಗರಿಕತೆಯ ತೊಟ್ಟಿಲಾಗಿವೆ. ವ್ಯಕ್ತಿ ಹುಟ್ಟು ಹಾಗೂ ಅಂತ್ಯ ನದಿಯಲ್ಲೇ ಆಗುವ ಕಾರಣಕ್ಕೆ ನದಿಯನ್ನು ಪವಿತ್ರ ಎಂದು ಭಾವಿಸಿ, 1989ರಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಮಹಾಮಂಡಾಲೇಶ್ವರ ಜಯೇಂದ್ರಪುರಿ ಸ್ವಾಮೀಜಿ, ವಾಟಾಳು ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಆದಿ ಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಡಾ.ಲಕ್ಷ್ಮಿಕಾಂತರೆಡ್ಡಿ, ಉಪವಿಭಾಗಾಧಿಕಾರಿ ರಕ್ಷಿತ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಬೆಟಸೂರ ಮಠ ಇನ್ನಿತರರು ಉಪಸ್ಥಿತರಿದ್ದರು.