ಮೈಸೂರು: ಕಳೆದೊಂದು ವಾರದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಬಹುತೇಕ ಜಲಾಶಯಗಳ ಒಳಹರಿವು ಹೆಚ್ಚಳವಾಗಿದ್ದು, ಕೆಲವು ಜಲಾಶಯಗಳು ಭರ್ತಿಯಾಗುವ ಹಂತ ತಲುಪಿದ್ದರೆ, ಮತ್ತೆ ಕೆಲವು ಜಲಾಶಯಗಳಿಂದ ಈಗಾಗಲೇ ನೀರನ್ನು ಬಿಡಲಾಗುತ್ತಿದ್ದು, ಕೆಆರ್ ಎಸ್ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ  ನೀರು ಹರಿದು ಬರುತ್ತಿದೆ.

ಕೇರಳದ ವೈನಾಡು ಹಾಗೂ ಕೊಡಗಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್, ಕಬಿನಿ, ನುಗು ಜಲಾಶಯದ ಒಳಹರಿವು ಹೆಚ್ಚಾಗಿದ್ದು, ನೀರಿನ ಮಟ್ಟ ಏರಿಕೆಯಾಗಿದೆ. ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಕೆಆರ್‌ ಎಸ್ ನೀರಿನ ಮಟ್ಟ 110 ಅಡಿ ತಲುಪಿದೆ. ಪ್ರಸ್ತುತ ಕಬಿನಿ ನೀರಿನ ಮಟ್ಟ 2282.33 ಅಡಿ ಇದ್ದು, 33640 ಕ್ಯುಸೆಕ್ ಒಳಹರಿವಿದೆ. ಜಲಾಶಯದ ಭದ್ರತೆ ದೃಷ್ಟಿಯಿಂದ 33625 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕೆಆರ್‌ಎಸ್ ನೀರಿನ ಮಟ್ಟ 110.60 ಅಡಿಗೆ ತಲುಪಿದ್ದು, 36674 ಕ್ಯುಸೆಕ್ ಒಳ ಹರಿವಿದ್ದರೆ 2361 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ತಾರಕ ಹಾಗೂ ನುಗು ಡ್ಯಾಂನ ನೀರಿನ ಮಟ್ಟವೂ ಹೆಚ್ಚಳವಾಗಿದ್ದು, ಭದ್ರತಾ ದೃಷ್ಟಿಯಿಂದ ನೀರನ್ನು ಹೊರಬಿಡಲಾಗಿದೆ.
02

ಬೀಚನಹಳ್ಳಿ ಕಬಿನಿ ಜಲಾಶಯ ಹಾಗೂ ಸರಗೂರು ನುಗು ಜಲಾಶಯಕ್ಕೆ ಜಿಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇರಳ ವೈನಾಡು ಮತ್ತು ಕಬಿನಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಿದ್ದು, ಹೆಚ್ಚು ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆ ಜಲಾಶಯ ಮತ್ತು ಮುಳುಗಡೆ ಪ್ರದೇಶಗಳನ್ನು ವೀಕ್ಷಿಸಿ ಅಧಿಕಾರಿಗಳಿಗೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಎಲ್ಲೆಡೆ ಮಳೆಯಾಗಿ ಜಲಾಶಯ ತುಂಬಿರುವುದರಿಂದ ಹೆಚ್ಚು ನೀರನ್ನು ನದಿಗೆ ಯಾವುದೇ ಸಮಯದಲ್ಲಾದರೂ ನೀರು ಬಿಡಬೇಕಾಗಬಹುದು. ಅಧಿಕಾರಿಗಳು ಪೂರ್ವಭಾವಿಯಾಗಿ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಜತೆಗೆ ಜನತೆಗೆ ತಗ್ಗು ಪ್ರದೇಶದಿಂದ ಹೊರ ಬರುವಂತೆ ಸೂಚಿಸಬೇಕು. ಈಗಾಗಲೇ ತಾಲೂಕು ಆಡಳಿತದ ಅಧಿಕಾರಿಗಳು ಮುಳುಗಡೆ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಕಬಿನಿ ಜಲಾಶಯದಿಂದ ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಇನ್ನು ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಳದಿಂದ ಮುಳುಗಡೆಯಾಗಿರುವ ನಂಜನಗೂಡು ನಂಜುಂಡೇಶ್ವರ ಸ್ವಾಮಿ ದೇವಾಲಯದ ಸ್ನಾನಘಟ್ಟ ಮತ್ತು ತಗ್ಗು ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣದ ಹಳ್ಳಿಕೇರಿ, ಹದಿನಾರು ಕಾಲು ಮಂಟಪ, ಸ್ನಾನಘಟ್ಟ ಸೇರಿದಂತೆ ಕೆಲ ಪ್ರದೇಶ ಮುಳುಗಡೆಯಾಗಿದ್ದು, ಜನತೆಗೆ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂಜನಗೂಡು ತಾಲೂಕಿನ ಕಡಜಟ್ಟಿ ಗ್ರಾಮ, ಹುಲ್ಲಹಳ್ಳಿ ಸುತ್ತಮುತ್ತಲಿನ ಪ್ರದೇಶಗಳು, ಹುಲ್ಲಹಳ್ಳಿ ಮೈಸೂರು ಸೇತುವೆ, ಬೊಕ್ಕಹಳ್ಳಿ, ಕುಳ್ಳಂಕಯ್ಯನ ಹುಂಡಿ, ಕಪಿಲಾ ನದಿ ಸ್ನಾನಘಟ್ಟಗಳಿಗೆ ತೆರಳಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ, ಅಪರ ಜಿಧಿಕಾರಿ ಡಾ.ಪಿ.ಶಿವರಾಜು, ಹುಣಸೂರು ಉಪ ವಿಭಾಗಾಧಿಕಾರಿ ವೆಂಕಟರಾಜು ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.