ಮೈಸೂರು: ಗಮನ ಬೇರೆಡೆ ಸೆಳೆದು ವೃದ್ದೆಯ 40 ಗ್ರಾಂ ಮಾಂಗಲ್ಯ ಸರ ಲಪಟಾಯಿಸಿದ ಘಟನೆ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೀಲಮ್ಮ(60) ಮಾಂಗಲ್ಯ ಸರ ಕಳೆದುಕೊಂಡವರು. ಬೆಳ್ಳೂರು ಕ್ರಾಸ್ ನಿಂದ ಮೈಸೂರಿಗೆ ಬರುವ ಬಸ್ ನಲ್ಲಿ ನೀಲಮ್ಮ ಪ್ರಯಾಣಿಸುತ್ತಿದ್ದ ವೇಳೆ ಇಬ್ಬರು ಅಪರಿಚಿತ ಹೆಂಗಸರು ಮಗು ಸಮೇತ ಶ್ರೀರಂಗಪಟ್ಟಣದಲ್ಲಿ ಹತ್ತಿದ್ದಾರೆ. ಮಗು ವಾಂತಿ ಮಾಡುತ್ತೆ ಕಿಟಕಿ ಪಕ್ಕ ಸ್ಥಳ ನೀಡುವಂತೆ ನೀಲಮ್ಮರನ್ನ ಕೇಳಿದ್ದಾರೆ.

ಇದಕ್ಕೆ ನೀಲಮ್ಮ ಒಪ್ಪಿಲ್ಲ. ಕೊಲಂಬಿಯಾ ಆಸ್ಪತ್ರೆ ಬಳಿ ಬಸ್ ಬಂದಾಗ ಮಹಿಳೆಯರು ಇಳಿಯಲು ಮುಂದಾಗಿ ತಮ್ಮ ಲಗೇಜ್ ನ್ನ ತೆಗೆಯುವಾಗ ನೀಲಮ್ಮ ಮೇಲೆ ಚಿಲ್ಲರೆ ಹಣ ಬೀಳಿಸಿದ್ದಾರೆ. ಹಣ ತೆಗೆದುಕೊಡಲು ನೀಲಮ್ಮ ಬಾಗಿದಾಗ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಟ್ ಮಾಡಿಕೊಂಡಿದ್ದಾರೆ.

ಎಲ್ ಐಸಿ ಸ್ಟಾಪ್ ಬಂದಾಗ ಹೆಂಗಸರು ಬಸ್ ಇಳಿದುಹೋಗಿದ್ದಾರೆ. ಮನೆಗೆ ಬಂದು ನೋಡಿದಾಗ ಚಿನ್ನದ ಮಾಂಗಲ್ಯ ಸರ ಕಳುವಾಗಿರುವುದು ಬೆಳಕಿಗೆ ಬಂದಿದೆ.ಚಿಲ್ಲರೆ ಕಾಸು ಮೈಮೇಲೆ ಬಿದ್ದಾಗ ಮಂಕು ಕವಿದಂತಾಯ್ತು ಎಂದು ದೂರಿನಲ್ಲಿ ತಿಳಿಸಿರುವ ನೀಲಮ್ಮ ರವರು ಅಪರಿಚಿತ ಹೆಂಗಸರ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.