ನಂಜನಗೂಡು: ಮಕ್ಕಳ ಸಮಯವನ್ನು ಕಿತ್ತುಕೊಳ್ಳುತ್ತಿರುವ ಮೊಬೈಲ್ ಫೋನ್ ನಿಂದ ತಮ್ಮ ಮಕ್ಕಳನ್ನು ದೂರ ಇರಿಸುವಂತೆ ಪೋಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಹೇಶ್ ಕಿವಿಮಾತು ಹೇಳಿದರು.

ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದ ಶ್ರೀ ಗುರುಮಲ್ಲೇಶ್ವರ ಮಹಾ ವಿದ್ಯಾಸಂಸ್ಥೆ ದೇವನೂರು, ಶ್ರೀ ಗುರುಮಲ್ಲೇಶ್ವರ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ 7ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಶ್ರೀ ಗುರುಮಲ್ಲೇಶ್ವರ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ದೇವನೂರು ಹೆಸರಿನಲ್ಲಿ ಶಕ್ತಿ ಇದೆ. ದಾಸೋಹದ ಜೊತೆಗೆ ಅಕ್ಷರದ ಜ್ಞಾನವನ್ನು ನೀಡುತ್ತಾ ಶ್ರೀಗಳು ಎಲ್ಲ ಜನಾಂಗದ ಪ್ರಗತಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಗ್ರಾಮೀಣ ಭಾಗದಲ್ಲಿ ಇಂಗ್ಲಿಷ್ ಶಾಲೆಯನ್ನು ತೆರೆದು ದಾರಿದೀಪವಾಗಿದ್ದಾರೆ.

ಮಕ್ಕಳು ಕಲಿಕೆಯ ಜೊತೆಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾತ್ರ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಇದಕ್ಕೆ ಪೋಷಕರು ಸಹಕರಿಸಬೇಕು ಆಗ ಮಾತ್ರ ತಮ್ಮ ಮಕ್ಕಳ ಪ್ರತಿಭೆ ಅನಾವರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಫೋನನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.

ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಗಳನ್ನು ಕೊಡಬೇಡಿ ಇದರಿಂದ ಅವರ ಜ್ಞಾನಶಕ್ತಿಯು ಕಡಿಮೆಯಾಗುತ್ತದೆ. ಅಲ್ಲದೆ ಪೋಷಕರು ಮಕ್ಕಳು ಮನೆಯಲ್ಲಿ ಓದುವಾಗ ಟಿವಿಯನ್ನು ನೋಡುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.

ನಂತರ ಮುಖ್ಯ ಭಾಷಣಕಾರ ಸಾಹಿತಿ ಕಳಲೆ ಗುರುಸ್ವಾಮಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಅವರನ್ನು ನಾವು ಸ್ಮರಿಸಿಕೊಳ್ಳಬೇಕು. ಮನುಷ್ಯತ್ವ ಗುಣಗಳು ಇತ್ತೀಚಿನ ದಿನಗಳಲ್ಲಿ ನಾಶವಾಗುತ್ತಿದೆ. ಅದನ್ನು ಉಳಿಸಿಕೊಳ್ಳುವಲ್ಲಿ ನಾವು ವಿಫಲರಾಗುತ್ತಿದ್ದೇವೆ.

ಧಾರವಾಹಿಗಳು ಮಹಿಳೆಯರನ್ನು ಹಾಳು ಮಾಡುತ್ತಿವೆ. ಎಷ್ಟೇ ತಂತ್ರಜ್ಞಾನವು ಮುಂದುವರಿದರು ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಹಾಗೆ ನಮ್ಮ ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸಬೇಕು ಎಂದು ತಿಳಿಸಿದರು.

ಪೋಷಕರ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಪೋಷಕರಿಗೆ ಬಹುಮಾನಗಳನ್ನು ಗ್ರಾಮ ಪಂಚಾಯಿತಿಗೆ ಅಧ್ಯಕ್ಷ ಅವಿನಾಶ್ ವಿತರಣೆ ಮಾಡಿದರು. ಗುರುಮಲ್ಲೇಶ್ವರ ಮಹಾವಿದ್ಯಾಸಂಸ್ಥೆಯ ಕಾರ್ಯದರ್ಶಿ ಹೆಚ್ ಎಂ ವೃಷಬೇಂದ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇನ್ನು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಹೇಶ್, ಗುರುಮಲ್ಲೇಶ್ವರ ಮಹಾವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಹೆಚ್.ಎಂ ವೃಷಬೇಂದ್ರ, ಸಾಹಿತಿ ಕಳಲೆ ಗುರುಸ್ವಾಮಿ, ದೇವನೂರು ಗ್ರಾಪಂ ಅಧ್ಯಕ್ಷ ಕೆ.ಎಸ್ ಅವಿನಾಶ್, ಗುರುಮಲ್ಲೇಶ್ವರ ಸೇವಾ ಟ್ರಸ್ಟ್ ಸದಸ್ಯರಾದ ಗುರುಸ್ವಾಮಿ, ಶಾಲೆಯ ಮುಖ್ಯ ಶಿಕ್ಷಕಿ ಸುನೀತಾ, ಶಾಲಾ ಉಸ್ತುವಾರಿ ಕೆ.ಜಿ ರಾಜಶೇಖರ ಮೂರ್ತಿ, ಶಿಕ್ಷಕರಾದ ಚಂದ್ರಶೇಖರ್, ಮಹದೇವಸ್ವಾಮಿ, ಪ್ರಕಾಶ್, ನಾಗೇಶ್, ಮಹೇಶ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.